
ಬೀದರ್: ಸೆ.8:ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರ ಬೇಡಿಕೆಗಳಿಗೆ ಏಳನೇ ವೇತನ ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ತಿಳಿಸಿದ್ದಾರೆ.
ಸಂಘದ ರಾಜ್ಯ ಅಧ್ಯಕ್ಷ ಕೆ. ಕೃಷ್ಣಪ್ಪ ಅವರ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಏಳನೇ ವೇತನ ಆಯೋಗದ ಅಧ್ಯಕ್ಷ ಸುಧಾಕರರಾವ್ ಅವರನ್ನು ಭೇಟಿ ಮಾಡಿ, ವೇತನ ತಾರತಮ್ಯ ಸೇರಿದಂತೆ ವಿವಿಧ ವಿಷಯಗಳನ್ನು ಮನವರಿಕೆ ಮಾಡಿದೆ ಎಂದು ಹೇಳಿದ್ದಾರೆ.
ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕು. ಬಡ್ತಿ ಹೊಂದಿದ ಎಲ್ಲ ಮುಖ್ಯಶಿಕ್ಷಕರಿಗೆ 10, 15, 20, 25 ಹಾಗೂ 30 ವರ್ಷದ ಬಡ್ತಿ ಕೊಡಬೇಕು. ಬೇಸಿಗೆ ರಜೆ ಹಾಗೂ ದಸರಾ ರಜೆ ಅವಧಿಯಲ್ಲಿ 30 ದಿನಗಳ ಗಳಿಕೆ ರಜೆ ಮಂಜೂರು ಮಾಡಬೇಕು. ಪ್ರಾಥಮಿಕ ಶಾಲೆಗಳಲ್ಲಿ ಗ್ರುಪ್ ಡಿ ನೌಕರನ್ನು ನೇಮಕ ಮಾಡಬೇಕು. ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಣ ಸಂಯೋಜಕ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಬೇಕು ಎನ್ನುವ ಬೇಡಿಕೆಗಳ ಬಗ್ಗೆ ಆಯೋಗದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಶಿಕ್ಷಕರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಸುಧಾಕರರಾವ್ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.