ಮುಖ್ಯಲೆಕ್ಕಿಗ ನಟೇಶ್ ಕಾರ್ಯಕ್ಕೆ ಮಹೇಂದ್ರ ಶ್ಲಾಘನೆ

ಕೋಲಾರ,ಜು,೧- ಜಿಲ್ಲೆಯ ವಿವಿಧ ಇಲಾಖೆಗಳು,ಶಾಲಾ ಕಾಲೇಜುಗಳ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ವೇತನ ಬಟವಾಡೆಯಾಗಲು ಹಲವಾರು ವರ್ಷಗಳಿಂದ ನೌಕರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಲೆಕ್ಕಿಗ ಆರ್.ನಟೇಶ್ ಅವರ ಸೇವೆ ಸ್ಮರಣೀಯ ಎಂದು ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ಎಂ.ಬಿ.ಮಹೇಂದ್ರ ಶ್ಲಾಘಿಸಿದರು.
ಜಿಲ್ಲಾ ಖಜಾನೆಯಲ್ಲಿ ೩೨ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಟೇಶ್‌ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.
ಸರ್ಕಾರಿ ನೌಕರರು, ಶಿಕ್ಷಕರು ತಮ್ಮ ಜೀವನ ನಿರ್ವಹಣೆಗೆ ವೇತನವನ್ನೇ ಅವಲಂಬಿಸಿದ್ದಾರೆ, ತಿಂಗಳ ಕೊನೆ ದಿನ ವೇತನ ಬಟವಾಡೆ ವಿಳಂಬವಾದರೆ ಅವರು ಪರಿತಪಿಸುವಂತೆ ಆಗುತ್ತದೆ, ಆದರೆ ನಟೇಶ್ ಅವರು, ಖಜಾನೆಗೆ ಬರುವ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಿ ಮಾದರಿಯಾಗಿದ್ದರು ಎಂದರು.
ಖಜಾನೆಗೆ ವೇತನ,ವಿವಿಧ ಭತ್ಯೆ, ವಿವಿಧ ಕಾಮಗಾರಿಗಳ ಬಿಲ್ಲುಗಳು ಸೇರಿದಂತೆ ಸರ್ಕಾರದ ಅನೇಕ ಯೋಜನೆಗಳ ಅನುದಾನವೂ ಇಲ್ಲೇ ಅನುಮೋದನೆಗೊಳ್ಳುತ್ತದೆ, ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಲೋಪಗಳಿಗೂ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸುವುದು ಅತ್ಯಂತ ಕ್ಲಿಷ್ಟಕರ ಎಂದರು.
ಖಜಾನೆಗೆ ಬರುವ ವೇತನ ಬಟವಾಡೆ ಬಿಲ್ಲುಗಳ ಅನುಮೋದನೆಗೆ ಮೊದಲ ಆದ್ಯತೆ ನೀಡಲಾಗಿದೆ, ಯಾವುದೇ ನೌಕರರಿಗೂ ವಿಳಂಬವಿಲ್ಲದಂತೆ ವೇತನ ಬಟವಾಡೆಗೆ ಒತ್ತು ನೀಡಲಾಗಿದೆ ಎಂದ ಅವರು, ಖಜಾನೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಖಜಾನೆಯನ್ನು ನೌಕರರು,ಸಾರ್ವಜನಿಕ ಸ್ನೇಹಿಯಾಗಿ ಪರಿವರ್ತಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿ, ಈ ನಿಟ್ಟಿನಲ್ಲಿ ಜಿಲ್ಲೆಯ ನೌಕರರು, ಖಜಾನೆಯ ಸಿಬ್ಬಂದಿಯ ಸಹಕಾರ ಕೋರಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಟೇಶ್, ಖಜಾನೆಯಲ್ಲಿ ಅತ್ಯುತ್ತಮವಾಗಿ, ನೌಕರ ಸ್ನೇಹಿಯಾಗಿಕೆಲಸ ನಿರ್ವಹಿಸಿದ ತೃಪ್ತಿ ಇದೆ, ಆತ್ಮಸಾಕ್ಷಿಗೆ ಅನುಗುಣವಾಗಿ ಇಲ್ಲಿ ಕೆಲಸ ಮಾಡಿದ್ದೇನೆ, ನನಗೆ ನನ್ನ ಕರ್ತವ್ಯ ನಿರ್ವಹಣೆಯಲ್ಲಿ ಇಲ್ಲಿ ಅಧಿಕಾರಿಗಳಾಗಿದ್ದ ಎಲ್ಲರೂ, ಸಹಕಾರ,ಮಾರ್ಗದರ್ಶನ ನೀಡಿದ್ದಾರೆ, ಅದರಲ್ಲೂ ಹಾಲಿ
ಉಪನಿರ್ದೇಶಕರಾದ ಮಹೇಂದ್ರ ಸರ್ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದ ಅವರು, ಇತರೆ ಸಿಬ್ಬಂದಿಯ ಸಹಕಾರವನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿದರು.
ಕೆಲವು ಬಾರಿ ಸರ್ವರ್ ಸಮಸ್ಯೆ ಮತ್ತಿತರ ಕಾರಣಗಳಿಂದ ತೊಂದರೆಯಾದರೂ, ಕಚೇರಿಗೆ ಬರುವ ಇತರೆ ಇಲಾಖೆಗಳ ಸಿಬ್ಬಂದಿಗೆ ಪ್ರೀತಿಯಿಂದ ಮಾತನಾಡಿಸಿ ವಿವರಿಸಿದರೆ ಎಲ್ಲರೂ ಗೊಂದಲಕ್ಕೆ ಅವಕಾಶ ನೀಡದೇ ಸಹಕರಿಸಿಕೊಂಡು ಸಾಗುತ್ತಾರೆ, ಇತರೆ ಸಿಬ್ಬಂದಿಯೂ ಈ ನಿಟ್ಟಿನಲ್ಲಿ ಸಂಯಮ ಕಾಯ್ದುಕೊಂಡು ವೇತನ ಬಟವಾಡೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧೀಕ್ಷಕ ಗಿರೀಶ್‌ಕುಮಾರ್, ಸಿಬ್ಬಂದಿ ಶ್ರೀನಿವಾಸಮೂರ್ತಿ ಮತ್ತಿತರರು ಹಾಜರಿದ್ದು, ಸನ್ಮಾನಿಸಿ ಶುಭ ಕೋರಿ, ಅವರ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಖಜಾನೆಯ ಜಯಪ್ರಕಾಶ್, ಸೋಮಶೇಖರ್, ಜೀವನ್, ನಾಗರಾಜ್, ಶಿವಣ್ಣ, ರಿತೇಶ್, ಮಲ್ಲಿಕಾರ್ಜುನ್, ವೆಂಕಟಪ್ಪ, ಸಾಕಮ್ಮ ರಾಣಿ ಮತ್ತಿತರರಿದ್ದು, ನಿವೃತ್ತರಾದ ನಟೇಶ್‌ರನ್ನು ಸನ್ಮಾನಿಸಿ ಶುಭ ಕೋರಿದರು.