ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ, ಸಂಪುಟಕ್ಕೆ ಬಿ.ಆರ್. ಪಾಟೀಲ್ ಸೇರ್ಪಡೆಗೆ ಆಗ್ರಹ

ಕಲಬುರಗಿ,ಮೇ.16: ರಾಜ್ಯದಲ್ಲಿ ದಲಿತ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳಲಾಗುತ್ತಿದ್ದು, ನಂತರ ಆ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದಿಂದ ಸರ್ಕಾರ ರಚಿಸಲಿದ್ದು, ಪ್ರಭಾವಿ ಮುಖಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ದಲಿತ ಮುಖಂಡ ಡಾ. ಶಿವಾನಂದ್ ಕಡಗಂಚಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ 135 ಅಭ್ಯರ್ಥಿಗಳು ಗೆದ್ದಿದ್ದಾರೆ. ಸರ್ಕಾರ ರಚಿಸಲೂ ಸಹ ಕಾಂಗ್ರೆಸ್ ಬಹುಮತ ಪಡೆದಿದೆ. ರಾಜ್ಯದಲ್ಲಿ ದಲಿತರ ಶೇಕಡಾ 70ರಷ್ಟು ದಲಿತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದಾರೆ. ಆದಾಗ್ಯೂ, ದಲಿತರಿಗೆ ಮತ ಬ್ಯಾಂಕ್ ಆಗಿ ಬಳಸಿಕೊಂಡು ಬೀಸಾಕುವ ಹುನ್ನಾರ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಹುಮತ ಪಡೆದ ಕಾಂಗ್ರೆಸ್ ಪಕ್ಷವು ಈ ಬಾರಿ ದೇಶ ಕಂಡ ಅತ್ಯಂತ ಪ್ರಭಾವಿ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮುಖ್ಯಮಂತ್ರಿ ಮಾಡಬೇಕು. ಆಳಂದ್ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ನೂತನ ಶಾಸಕ ಬಿ.ಆರ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಇಡೀ ಕರ್ನಾಟಕದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಶಂಭುನಾಥ್ ನಾಗಲೇಗಾಂವ್, ಡಾ. ವಿಜಯಕುಮಾರ್ ಬೀಳಗಿ, ಶಾಂತಪ್ಪ ಹೆಬಳಿ, ಡಾ. ಮಲ್ಲಿಕಾರ್ಜುನ್ ಹುಲ್ಲೆ, ಡಾ. ಶರಣಬಸಪ್ಪ ಭೀಮಪೂರೆ ಮುಂತಾದವರು ಉಪಸ್ಥಿತರಿದ್ದರು.