ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ ಸಚಿವ ಈಶ್ವರಪ್ಪ, ರಾಜ್ಯಪಾಲ ಮತ್ತು ವರಿಷ್ಠರಿಗೆ ಲಿಖಿತ ದೂರು

ಬೆಂಗಳೂರು, ಮಾ. 31- ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ನಡುವೆ ಕೆಲದಿನಗಳಿಂದ ನಡೆದಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಹಾಗು ಬಿಜೆಪಿ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರೊಂದಿಗೆ ಮುನಿಸಿಕೊಂಡು ಅವರ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದನ್ನು ನಿಲ್ಲಿಸಿದ್ದ ಸಚಿವ ಈಶ್ವರಪ್ಪ ಈಗ ಯಡಿಯೂರಪ್ಪ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಮುಖ್ಯಮಂತ್ರಿ ವಿರುದ್ಧ ನಿರ್ಣಾಯಕ ಕದನಕ್ಕೆ ಇಳಿದಿದ್ದಾರೆ. ಈಶ್ವರಪ್ಪನವರ ನಡವಳಿಕೆ ರಾಜ್ಯ ಬಿಜೆಪಿಯಲ್ಲಿ ಹಾಗು ಸರ್ಕಾರದ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದ್ದು ಮುಖ್ಯಮಂತ್ರಿ ಯಡಿಯೂರಪ್ಪನವರ ಗದ್ದುಗೆಗೆ ಸಂಚಕಾರ ತರುವ ಬೆಳವಣಿಗೆ ಘಟನೆ ನಡೆದರೂ ಅಚ್ಚರಿಪಡುವಂತಿಲ್ಲ.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅವರ ಸಚಿವ ಸಂಪುಟದ ಪ್ರಭಾವಿ ಸಚಿವರೊಬ್ಬರು ತಿರುಗಿ ಬಿದ್ದಿರುವುದು ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದೆ.ಇದು ರಾಜಕೀಯವಾಗಿ ನಾನಾರೀತಿಯ ಬೆಳವಣಿಗೆಗಳಿಗೆ ಕಾರಣವಾಗಿದೆ.
ಸಚಿವ ಈಶ್ವರಪ್ಪನವರು ರಾಜ್ಯಪಾಲರಿಗೆ ದೂರು ಸಲ್ಲಿಸುವ ಜೊತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಹಸ್ತಕ್ಷೇಪದ ಬಗ್ಗೆ ದೂರು ಸಲ್ಲಿಸಿರುವುದು ವಿಶೇಷ.
ಕಳೆದ ಒಂದುವರೆ ವರ್ಷದಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವನಾಗಿ ಕೆಲಸ ಮಾಡುತ್ತಿರುವ ತಮ್ಮ ಗಮನಕ್ಕೆ ಬಾರದಂತೆ ಸಿಎಂ ಯಡಿಯೂರಪ್ಪ ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ಹಿರಿಯ ಸಚಿವನಾಗಿರುವ ತಮಗೆ ಇದರಿಂದ ನೋವಾಗಿದೆ ಎಂದಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 1200 ಕೋಟಿ ರೂ ಅನುದಾನಕ್ಕೆ. ಸಂಬಂಧಿಸಿದಂತೆ ಕಾನೂನು ಮೀರಿ ಸುಖಾಸುಮ್ಮನೆ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆರ್​ಡಿಪಿಆರ್​ ಇಲಾಖೆಯ ಅನುದಾನವನ್ನು ನೇರವಾಗಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹಂಚಿದ್ದಾರೆ ಎಂದು ರಾಜ್ಯಪಾಲ ವಜುಭಾಯಿವಾಲಾ ಅವರನ್ನು ಇಂದು ಸಂಜೆ ರಾಜಭವನದಲ್ಲಿ ಭೇಟಿ ಮಾಡಿ ಈಶ್ವರಪ್ಪ ಅವರು ಲಿಖಿತ ದೂರು ನೀಡಿದ್ದಾರೆ.
ಗ್ರಾಮೀಣಾಭಿವೃದ್ಧೀ ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ,ವರಿಷ್ಠರಿಗೆ ದೂರು ನೀಡುವ ಮೂಲಕ ರಾಜ್ಯ ಬಿಜೆಪಿಯಲ್ಲಿನ ಗದ್ದುಗೆ ಗುದ್ದಾಟ ಬೀದಿಗೆ ಬಂದಿದೆ
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗಾಗಲೇ ತಿರುಗಿಬಿದ್ದಿದ್ದು ಸಮಯ ಸಿಕ್ಕಾಗಲೆಲ್ಲಾ ಯತ್ನಾಳ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡುತ್ತಿದ್ದಾರೆ ಈಗ ಸಚಿವ ಈಶ್ವರಪ್ಪನವರೇ ಯಡಿಯೂರಪ್ಪನವರ ವಿರುದ್ಧ ತೊಡೆತಟ್ಟಿ ಅಖಾಡಕ್ಕೆ ಇಳಿದಿರುವುದು ಮುಂದೆ ಇದು ರಾಜಕೀಯವಾಗಿ ಯಾವ ಸ್ವರೂಪ ಪಡೆಯುತ್ತದೆ ಹೇಳಲುಬಾರದು.
ಬಜೆಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಘೋಷಿಸುವ ಮುನ್ನ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದೂ ಈಶ್ವರಪ್ಪ ದೂರಿದ್ದಾರೆ ಎಂದು ಹೇಳುವ ಪತ್ರ ಈಗ ಸೋಶಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷಗಳ ಶಾಸಕರ ಆಯ್ದ ಕ್ಷೇತ್ರಗಳಿಗೆ ಅನುದಾನ ಒದಗಿಸುವ ಮೂಲಕ ಬಿಜೆಪಿ ಶಾಸಕರು ತಮ್ಮ ಮೇಲೆ ಸಿಟ್ಟು ಆಗುವಂತೆ ಮಾಡಿದ್ದಾರೆ ಇತ್ತೀಚಿಗೆ ಬಿಜೆಪಿ ಶಾಸಕರು ತಮ್ಮ ವಿರುದ್ಧ ಮುಖ್ಯಮಂತ್ರಿಯವರಿಗೆ ದೂರು ನೀಡಲು ಯಡಿಯೂರಪ್ಪ ಅವರೇ ಕಾರಣ ಎಂದು ಈಶ್ವರಪ್ಪ ಹರಿಹಾಯ್ದಿದ್ದಾರೆ
ಈ ಬಗ್ಗೆ ಈಶ್ವರಪ್ಪ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಯಡಿಯೂರಪ್ಪ ಅವರ ಕಾರ್‍ಯಶೈಲಿ ಬದಲಿಸದಿದ್ದರೇ ಕಷ್ಟ ಎಂಬ ಮಾತುಗಳನ್ನು ಹೇಳಿದ್ದಾರೆ.
ಕಳೆದ ಬಜೆಟ್ ನಲ್ಲಿ ತಮ್ಮ ಇಲಾಖೆಗೆ ನಿಗದಿ ಮಾಡಿದ ಅನುದಾನವನ್ನು ಬಿಡುಗಡೆ ಮಾಡದ ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನಗೊಂಡಿದ್ದ ಈಶ್ವರಪ್ಪ ಅವರು ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ಮುಖಕ್ಕೆ ಮುಖ‌ ಕೊಟ್ಟು ಮಾತನಾಡುವುದನ್ನು ನಿಲ್ಲಿಸಿದ್ದರು.
ಈ ಮಧ್ಯೆ ಯಡಿಯೂರಪ್ಪ ಅವರ ನಡವಳಿಕೆಯ ವಿರುದ್ದ ಸಚಿವ ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ,ಅಮಿತ್ ಷಾ,ಜೆ.ಪಿ.ನಡ್ಡಾ,ಅರುಣ್ ಸಿಂಗ್,ಸಿ.ಟಿ.ರವಿ ಅವರಿಗೆ ಪತ್ರ ಪತ್ರ ಬರೆದಿದ್ದಾರೆ ಎನ್ನಲಾಗಿದೆ.