ಮುಖ್ಯಮಂತ್ರಿ ಬದಲಾವಣೆ ಖಚಿತ :ಯತ್ನಾಳ

ವಿಜಯಪುರ 21- ಪಂಚರಾಜ್ಯಗಳ ಚುನಾವಣೆ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ನೂರಕ್ಕೆ ನೂರು ಖಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
ಈ ಮುಖ್ಯಮಂತ್ರಿಗಳನ್ನ ತೆಗೆದುಕೊಂಡು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಉಳಿಯಲ್ಲ, ಮುಂದೆ ರಾಜ್ಯದಲ್ಲಿ ಬಿಜೆಪಿ ಉಳಿಯಬೇಕಾದರೆ ಸಿಎಂ ಬದಲಾವಣೆ ಮಾಡಲೇ ಬೇಕು ಎಂದು ಆಗ್ರಹಿಸಿದರು. ಪಂಚರಾಜ್ಯಗಳ ಚುನಾವಣೆ ಬಳಿಕ ಸಿಎಂ ಬದಲಾವಣೆ ಯಾಗಲಿದೆ ಅಲ್ಲಿಯವರೆಗೆ ಕಾದು ನೋಡಿ ಎಂದರು.
ಕಾಲವೇ ಎಲ್ಲದಕ್ಕು ಉತ್ತರ ಕೊಡಲಿದೆ:
ಉತ್ತರಾಖಂಡದಲ್ಲಿ ಬದಲಾವಣೆ ಮಾಡಿದಂತೆ ಹರಿಯಾಣ, ಕರ್ನಾಟಕ ಮುಂದಿನ ಸಾಲಿನಲ್ಲಿವೆ ಎಂದು ಮತ್ತೆ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಉತ್ತರ ಕರ್ನಾಟಕದ ಧ್ವನಿಯನ್ನ ಯಾರು ತಗ್ಗಿಸುವದು ಸಾಧ್ಯವಿಲ್ಲ, ಕಾಲವೇ ಎಲ್ಲದಕ್ಕೂ ಉತ್ತರ ಹೇಳಲಿದೆ.ಕೆಲವೊಂದಿಷ್ಟು ದಿನ ಇರುತ್ತೆ ಎಂದು ಮಾರ್ಮಿಕವಾಗಿ ನುಡಿದರು. ಐದು ರಾಜ್ಯಗಳ ಚುನಾವಣೆ ಮುಗಿಯಲಿ. ಯಾರ ಧ್ವನಿ ಎತ್ತರವಾಗುತ್ತೆ ನೋಡಿ ಎಂದು ಸವಾಲು ಹಾಕಿದರು. ಇನ್ನೂ ಅರುಣಸಿಂಗ್ ಯತ್ನಾಳ್ ಗೆ ಮಹತ್ವ ಕೊಡಬೇಡಿ ಎಂದಿದ್ದಾರೆ. ಆದರು ನೀವು ಮಾಧ್ಯಮದವರು ಮಹತ್ವ ಕೊಡ್ತಿದ್ದೀರಿ ಎಂದ ಯತ್ನಾಳ್ ನಗೆ ಚಟಾಕಿ ಹಾರಿಸಿದರು.