ಮುಖ್ಯಮಂತ್ರಿ ಬದಲಾವಣೆ ಕೇವಲ ಸೃಷ್ಟಿ: ಕೆ.ಎಸ್.ಈಶ್ವರಪ್ಪ

ಮೈಸೂರು, ಜ.11:- ಮುಖ್ಯಮಂತ್ರಿ ಬದಲಾವಣೆ ಅಂತ ಸುಮ್ಮನೆ ಮಾತನಾಡುತ್ತಾರೆ. ಇದು ಕೇವಲ ಸೃಷ್ಟಿ ಮಾಡಿರುವುದು ಅಷ್ಟೇ. ಕೇಂದ್ರ ನಾಯಕರು, ಶಾಸಕರು ಯಾರೂ ಹೇಳಿಲ್ಲ. ಇದನ್ನ ಹೇಳುತ್ತಿರುವುದು ಸಿದ್ದರಾಮಯ್ಯನವರು ಒಬ್ಬರೇ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಅವರಿಗೆ ಅದರ ಮೇಲೆ ಕಣ್ಣು. ಹಾಗಾಗಿ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ಹೇಳಿ ಅಭ್ಯಾಸ ಆಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಹತ್ತತ್ತು ಬಾರಿ ಹೇಳಿದರೆ ಜನ ನಂಬುತ್ತಾರೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಆದರೆ ಇದು ಸುಳ್ಳು ಕೇವಲ ಮಾಧ್ಯಮಗಳಲ್ಲಿ ಮಾತ್ರ ಬರುತ್ತಿರುವ ಸುದ್ದಿ ಅಷ್ಟೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು ಗೆದ್ದವರು ಸ್ವಾಭಾವಿಕವಾಗಿ ಮಂತ್ರಿ ಆಗಬೇಕು ಅಂತ ಅಪೇಕ್ಷೆ ಮಾಡ್ತಾರೆ. ಮಂತ್ರಿಯಾಗಬೇಕು ಎಂದು ಅಪೇಕ್ಷೆ ಪಡುವುದರಲ್ಲಿ ತಪ್ಪಿಲ್ಲ. ಮಂತ್ರಿಯಾದವರಿಗೆ ಆಗದವರು ಸಹಕಾರ ಕೊಡುತ್ತಾರೆ. ಜನರು ಬಿಜೆಪಿ ಆಡಳಿತ ಮಾಡಲಿ ಅಂದ್ರು. ಆದರೆ ಅಷ್ಟು ಸ್ಥಾನ ಸಿಗಲಿಲ್ಲ. ಮುಖ್ಯಮಂತ್ರಿಗಳು ಭರವಸೆ ಕೊಟ್ಟಿರುವಂತೆ ಬೇರೆ ಪಕ್ಷದಿಂದ ಬಂದ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕಿದೆ. ಅದರಂತೆ ಅವರಿಗೆ ಕೊಟ್ಟು ಉಳಿದಿರುವುದರಲ್ಲಿ ನೀಡಲಾಗುತ್ತೆ ಎಂದರು.
ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಲ್ಲ ಅಂತ ಯತ್ನಾಳ್ ಹೇಳಿದ್ದಾರೆ. ಅವರನ್ನು ಮಂತ್ರಿ ಮಾಡುವುದು ಬಿಡುವುದು ಮುಖ್ಯಮಂತ್ರಿ ಗಳಿಗೆ ಬಿಟ್ಟಿದ್ದು. ಒಂದು ವೇಳೆ ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿ ಮಂತ್ರಿ ಮಾಡುತ್ತೇವೆ ಅಂದರೆ ಅದನ್ನು ಅವರು ಒಪ್ಪಿಕೊಳ್ಳಬೇಕು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೆಲವು ಬಾರಿ ಅವರು ಬಹಿರಂಗವಾಗಿ ಏನೇನೋ ಟೀಕೆ ಮಾಡಿಬಿಡುತ್ತಾರೆ. ಇದು ತಪ್ಪು ಇದರ ಬಗ್ಗೆ ನಾವು ಹೇಳಿದ್ದೇವೆ. ಆದರೆ ಮಂತ್ರಿ ಮಾಡಬೇಕು ಅಂತ ನಿರ್ಧಾರ ಕೈಗೊಂಡರೆ ಅವರು ಒಪ್ಪಿಕೊಳ್ಳಬೇಕು. ಅವರನ್ನು ಮಂತ್ರಿ ಮಾಡುತ್ತಾರಾ ಇಲ್ಲವಾ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
2023 ಕ್ಕೆ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೆ ಸಿಎಂ ಆಗುತ್ತೇನೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೆಲವರು ಹಗಲು ಕನಸು ಕಾಣುತ್ತಿರುತ್ತಾರೆ. ಅದೇ ರೀತಿ ಕುಮಾರಸ್ವಾಮಿ,ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಆಗುತ್ತೇನೆ ಅಂತಿದ್ದಾರೆ. ಅವರ ಪಕ್ಷದವರು ಯಾರಾದರು ಹೇಳಿದ್ದಾರಾ ? ಕುಮಾರಸ್ವಾಮಿ ಅವರು ಕೂಡ ಅದೇ ರೀತಿ ಮಾತನಾಡುತ್ತಿದ್ದಾರೆ. ಇವರಿಬ್ಬರದು ಹಗಲು ಕನಸು. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ. ಜೆ.ಡಿ.ಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಯುವರಾಜ್ ಎಂಬಾತನ ಮುಖವನ್ನು ನಾನು ಟಿವಿಯಲ್ಲೇ ನೋಡಿದ್ದು. ಜೀವಂತವಾಗಿ ನಾನು ಆತನ ಮುಖ ನೋಡಿಲ್ಲ. ಬಹಳ ಬುದ್ದಿವಂತಿಕೆಯಿಂದ ಅನೇಕರಿಗೆ ಮೋಸ ಮಾಡಿದ್ದಾನೆ. ಈ ರೀತಿ ಒಬ್ಬೊಬ್ಬರು ಇರುತ್ತಾರೆ. ವೇಣುಗೋಪಾಲ್ ಆದಿಯಾಗಿ ಎಲ್ಲಾ ಪಕ್ಷದವರನ್ನು ಈತ ಭೇಟಿ ಮಾಡಿದ್ದಾನೆ. ಆದರೆ ದಿನೇಶ್ ಗುಂಡೂರಾವ್ ಬಿಜೆಪಿಯವರ ಭೇಟಿಯಾಗಿದ್ದಾನೆ ಈ ಬಗ್ಗೆ ತನಿಖೆಯಾಗಬೇಕು ಅಂತ ಹೇಳುತ್ತಾರೆ. ಹಾಗಾದ್ರೆ ವೇಣುಗೋಪಾಲ್ ಭೇಟಿ ಬಗ್ಗೆ ತನಿಖೆಯಾಗೋದು ಬೇಡ್ವ. ಎಲ್ಲವನ್ನು ರಾಜಕೀಯವಾಗೆ ನೋಡಬಾರದು. ಪಕ್ಷಾತೀತಿವಾಗಿ ಇದನ್ನು ನೋಡಬೇಕು. ಯುವರಾಜ್ ರಂತವರು ಹಲಾಲ್ ಟೋಪಿಗಳು, 420 ಗಳು. ಇಲ್ಲಿ ರಾಜಕೀಯವನ್ನು ಹುಡುಕಬಾರದು ಎಂದರು.