ಮುಖ್ಯಮಂತ್ರಿ ಪದಕ ಪಡೆದ ಆರಕ್ಷಕ ಅಂಜುಟಗಿಗೆ ಸನ್ಮಾನ

ತಿಕೋಟಾ, ಮಾ.30-ಯಾವುದೇ ವ್ಯಕ್ತಿ ಸರ್ಕಾರಿ ಅಥವಾ ಖಾಸಗಿ ಸೇವೆಯಲ್ಲಿದ್ದರೂ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೇ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎನ್ನುವುದಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ಪೋಲೀಸ್ ಠಾಣೆಯ ಮುಖ್ಯ ಆರಕ್ಷಕ ರಾಘವೇಂದ್ರ ಅಂಜುಟಗಿ ಅವರು ಉತ್ತಮ ಉದಾಹರಣೆ.
ಇತ್ತಿಚೆಗೆ 2020ನೇ ಸಾಲಿನ ರಾಜ್ಯ ಪೋಲೀಸ್‍ರಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದ್ದು ವಿಜಯಪುರ ಜಿಲ್ಲೆಗೆ ಎರಡು ಪದಕಗಳು ಸಂದಿವೆ.
ಅದರಲ್ಲಿ ತಿಕೋಟಾ ಪೋಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ರಾಘವೇಂದ್ರ ಡಿ. ಅಂಜುಟಗಿಯವರು ಒಬ್ಬರಾಗಿದ್ದು ಇದೇ ಎಪ್ರೀಲ್ 2 ರಂದು ಪೋಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಬೆಂಗಳೂರಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ. ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ.
ಚಡಚಣ ತಾಲೂಕಿನ ಲೋಣಿ ಬಿ.ಕೆ. ಗ್ರಾಮದ ದುಂಡಪ್ಪ ಹಾಗೂ ಶಾಂತಾಬಾಯಿ ಅವರ ಉದರದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ತಾಯಿಯ ತವರುಮನೆಯಾದ ನಾಗಠಾಣ ಹಾಗೂ ಲೋಣಿಯಲ್ಲಿ ಮಾಡಿದರು. ಪ್ರೌಢಶಾಲೆ ಹಾಗೂ ಪಿ.ಯು.ಸಿ.ಯನ್ನು ಕೂಡ ಲೋಣಿಯಲ್ಲಿಯೇ ಮಾಡಿ ಬಿ.ಎ. ಪದವಿಯನ್ನು ವಿಜಯಪುರದ ಎಸ್.ಬಿ. ಆಟ್ರ್ಸ್‍ದಲ್ಲಿ ಓದಿದರು. ನಂತರ ಬಿ.ಎಡ್. ಶಿಕ್ಷಣವನ್ನು ಮೈಸೂರಿನ ಕಾಗಿನೆಲೆ ಶಿಕ್ಷಣ ಸಂಸ್ಥೆಯಿಂದ ಪೂರೈಸಿದರು.
2005ರಲ್ಲಿ ಆರಕ್ಷಕರಾಗಿ ನೇಮಕಗೊಂಡ ಅಂಜುಟಗಿಯವರು ವಿಜಯಪುರದಲ್ಲಿ ಟ್ರಾಫೀಕ್ ಪೋಲೀಸ ಸ್ಟೇಶನ ಹಾಗೂ ಗ್ರಾಮೀಣ ಪೋಲೀಸ್ ಠಾಣೆಗಳಲ್ಲಿ 10 ವರ್ಷಗಳ ಸೇವೆ ಸಲ್ಲಿಸಿ 2015 ರಿಂದ 2018ರವರೆಗೆ ತಿಕೋಟಾ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ 2018 ರಲ್ಲಿ ಮುಖ್ಯ ಆರಕ್ಷಕ ಅಂತಾ ಬಡ್ತಿ ಹೊಂದಿದ್ದಾರೆ.
ಪ್ರಸ್ತುತ ವಿಜಯಪುರದ ಸಿ.ಪಿ.ಆಯ್. ಆಫೀಸಿನಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾರ್ಯವನ್ನು ನೋಡಿ ಸರ್ಕಾರ ಗುರುತಿಸಿ, ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸುತ್ತಿರುವುದು ಅವರ ಕರ್ತವ್ಯ ನಿಷ್ಠೆಗೆ ಸಂದ ಗೌರವವಾಗಿದೆ.
ಜಿಲ್ಲೆಯ ಇಬ್ಬರಿಗೆ ಮುಖ್ಯಮಂತ್ರಿಗಳ ಪದಕ ಬಂದ ಈ ಸಂದರ್ಭದಲ್ಲಿ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ತಾಲೂಕಾ ಕಸಾಪ ಅಧ್ಯಕ್ಷ ಸೋಮಶೇಖರ ದಾ. ಜತ್ತಿ, ರೈತಮಿತ್ರ ಸಹಕಾರಿ ಸಂಘದ ನಿರ್ದೇಶಕ ಸುನೀಲಗೌಡ ನಾಲಾ, ಜಾಕೀರ ಫರ್ಟಿಲೈಜರ್ ಸಮೂಹ ಸಂಸ್ಥೆಯ ಮುಖ್ಯಸ್ಥ ಎಚ್.ಎಂ. ಬಾಗವಾನ, ಕಸಾಪ ಖಜಾಂಚಿ ಸದಾಶಿವ ಮಂಗಸೂಳಿ ಸೇರಿದಂತೆ ಹಲವಾರು ಗಣ್ಯರು ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.