ಮುಖ್ಯಮಂತ್ರಿ ಚಂದ್ರು ಅವರಿಗೆ ರಂಗಮನೆ ಪ್ರಶಸ್ತಿ ಪ್ರದಾನ

ಸುಳ್ಯ, ಮಾ.೧೬- ವೃತ್ತಿ ರಂಗಭೂಮಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ವೃತ್ತಿ ಧರ್ಮವನ್ನು ಇಟ್ಟುಕೊಂಡು ಬೆಳೆಸುತ್ತಿರುವ ಜೀವನ್‌ರಾಂ ರಾಜ್ಯಕ್ಕೇ ಮಾದರಿಯಾದ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕೆಲಸಗಳಿಗೆ ಸರಕಾರ ಆರ್ಥಿಕ ಭದ್ರತೆ ನೀಡಿ ಬೆಳೆಸಬೇಕು ಎಂದು ರಂಗಭೂಮಿ ಮತ್ತು ಚಲನಚಿತ್ರದ ಹಿರಿಯ ನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಹೇಳಿದರು.
ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಬಹುಭಾಷಾ ನಾಟಕೋತ್ಸವ ಸಮಾರೋಪದಲ್ಲಿ ೨೦೨೧ ನೇ ಸಾಲಿನ ರಂಗ ಮನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು, ರಂಗ ಚಟುವಟಿಕೆ ಕೇಂದ್ರಗಳು ಮತ್ತು ಕಲಾವಿದರು ಸಂಕಷ್ಟದಲ್ಲಿದ್ದಾರೆ. ರಂಗಭೂಮಿ ನಶಿಸುತ್ತಿರುವ ಈ ಸಂದರ್ಭದಲ್ಲಿ ಸರಕಾರ ಹೆಚ್ಚಿನ ಅನುದಾನ ನೀಡಿ ಕಲೆ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಮೀನುಗಾರಿಕಾ ಮತ್ತು ಜಲಸಾರಿಗೆ ಸಚಿವ ಎಸ್.ಅಂಗಾರ ವಹಿಸಿ ಮಾತನಾಡಿ ಕಲೆ ಮತ್ತು ಸಂಸ್ಕೃತಿಗಳು ಒಂದು ಸಮಾಜವನ್ನು ಜೀವಂತವಾಗಿರಿಸುತ್ತದೆ. ಸಮಾಜ ಗುರುತಿಸುವ ರೀತಿಯಲ್ಲಿ ವ್ಯಕ್ತಿಗಳು ಬೆಳೆಯಬೇಕು. ಕಲೆ ಸಂಸ್ಕೃತಿ ಮತ್ತು ಕಲಾವಿದರ ಮೂಲಕ ಸಮಾಜ ಬೆಳಗುತ್ತದೆ ಎಂದು ಹೇಳಿದರು.
. ಬೆಂಗಳೂರಿನ ಪ್ರಸಿದ್ಧ ರಂಗನಿರ್ದೇಶಕ ಡಾ| ಬಿ.ವಿ.ರಾಜಾರಾಂ ಸಮಾರೋಪ ಭಾಷಣ ಮಾಡಿ, ರಾಜ್ಯದ ರಂಗಭೂಮಿ ಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆದ ರಂಗಾಯಣ, ನೀನಾಸಂ ನಂತೆ ರಂಗಮನೆಯೂ ಸ್ಥಾನ ಪಡೆಯುತ್ತದೆ ಎಂದು ಶ್ಲಾಘಿಸಿದರು
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಪ್ರಶಸ್ತಿ ಪ್ರದಾನ ಮಾಡಿದರು. ಕವಿ ಸುಬ್ರಾಯ ಚೊಕ್ಕಾಡಿ ಶುಭಾಶಂಸನೆ ಮಾಡಿದರು. ರಂಗ ಮನೆಯ ರೂವಾರಿ ಜೀವನ್ ರಾಂ ಸುಳ್ಯ ಸ್ವಾಗತಿಸಿದರು. ಡಾ. ಸುಂದರ್ ಕೇನಾಜೆ ಸನ್ಮಾನ ಪತ್ರ ವಾಚಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಡಾ. ವಿದ್ಯಾ ಶಾರದೆ ವಂದಿಸಿದರು. ಪದ್ಮಾ ಚಂದ್ರು, ಸುಜನಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಲಾಗಂಗೋತ್ರಿ ಬೆಂಗಳೂರು ಅಭಿನಯದ ಮುಖ್ಯಮಂತ್ರಿ ನಾಟಕದ ೭೩೦ ನೇ ಪ್ರದರ್ಶನ ನಡೆಯಿತು.