
ಚಾಮರಾಜನಗರ, ಮೇ.20:- ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಆಯ್ಕೆಯಗಿರುವ ಸಿದ್ದರಾಮಯ್ಯ ಅವರಿಗೆ ಆಯುಷ್ಯ ಆರೋಗ್ಯ ಹಾಗೂ ಐದು ವರ್ಷಗಳ ಪೂರ್ಣ ಅಧಿಕಾರ ನಡೆಸುವಂತಾಗಲಿ ಎಂದು ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಅಮಾವಸ್ಯೆ ದಿನವಾದ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಹಳೇಪುರ ಬೆಳ್ಳೇಗೌಡ ನೇತೃತ್ವದಲ್ಲಿ ನಗರದಲ್ಲಿರುವ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಮುಖಂಡರು ಹಾಗೂ ಅಭಿಮಾನಿಗಳು ಸ್ವಾಮಿಗೆ ವಿಶೇಷ ಪೂಜೆ, ಹಾಲಿನ ಅಭಿಷೇಕ, ಎಳೆನೀರಿನ ಅಭಿಷೇಕ ಹಾಗೂ ವಿವಿಧ ಪುಷ್ಟಗಳಿಂದ ಪೂಜೆ ಸಲ್ಲಿಸಲಾಯಿತು.
ಸಿದ್ದರಾಮಯ್ಯ ಅವರು ಐದು ವರ್ಷಗಳು ಪೂರ್ಣ ಮುಖ್ಯಮಂತ್ರಿಗಳಾಗಿ ರಾಜ್ಯದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ಶ್ರೀ ಚಾಮರಾಜೇಶ್ವರಸ್ವಾಮಿ ಕುರುಣಿಸಲಿ. ಅವರ ಆಡಳಿತದಲ್ಲಿ ಜಿಲ್ಲೆಯು ಹೆಚ್ಚಿನ ರೀತಿ ಯಲ್ಲಿ ಅಭಿವೃದ್ದಿಯಾಗಲಿ. ಶ್ರೀಚಾಮರಾಜೇಶ್ವರಸ್ವಾಮಿ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಅಯುಷ್ಯು, ಆರೋಗ್ಯವನ್ನು ಕೊಟ್ಟು ಜನರ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಲಿ ಎಂದು ಬೇಡಿಕೊಂಡು ವಿಶೇಷ ಪೂಜೆಯನ್ನು ಕೈಗೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಬೆಳ್ಳೇಗೌಡ ತಿಳಿಸಿದರು.
ಪೂಜೆಯ ಬಳಿಕ ಸಾರ್ವಜನಿಕರು ಹಾಗು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ಹುಂಡಿ ನಾಗರಾಜು, ನಿರ್ದೇಶಕ ಮಾದಾಪುರ ಗುರುಸ್ವಾಮಿ, ಮುಖಂಡರಾದ ನಂದಕುಮಾರ್, ಹಳೇಪುರ ಬಸವಣ್ಣ, ಮಸಗಾಪುರ ಮರಿಸ್ವಾಮಿ, ಶಾರದ ಮೊದಲಾದವರು ಇದ್ದರು.