ಮುಖ್ಯಮಂತ್ರಿಗಳ ಲಂಡನ್ ಪ್ರವಾಸ ರದ್ದು

ಬೆಂಗಳೂರು, ಮೇ.14- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಂಡನ್ ಪ್ರವಾಸವನ್ನು ಕಡೆಗಳಿಗೆಯಲ್ಲಿ ರದ್ದುಪಡಿಸಿದ್ದಾರೆ.
ಮೇ 21ರಂದು ಮುಖ್ಯಮಂತ್ರಿಗಳು ಲಂಡನ್ ಪ್ರವಾಸಕ್ಕೆ ತೆರಳಬೇಕಾಗಿತ್ತು.ಆದರೆ ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ದಾವೋಸ್‍ಗೆ ತೆರಳಲಿದ್ದಾರೆ.
ಮುಖ್ಯಮಂತ್ರಿಗಳ ಬಹುನಿರೀಕ್ಷಿತ ಲಂಡನ್ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ. ಲಂಡನ್​ ಭೇಟಿಯ ವೇಳೆ ಬ್ರಿಟಿಷ್ ಸಂಸತ್ತಿನ ಎದುರಿನ ಭಗವಾನ್ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಲಂಡನ್‌ನ ಭಾರತೀಯ ಹೈಕಮಿಷನ್‌ನಲ್ಲಿ ಕನ್ನಡಿಗರ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದರು.
1983 ರಲ್ಲಿ ದಿವಂಗತ ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಲಂಡನ್ ಗೆ ಅಧಿಕೃತ ಭೇಟಿ ನೀಡಿದ್ದರು. ನಂತರ ಯಾವುದೇ ಮುಖ್ಯಮಂತ್ರಿ ಭೇಟಿ ನೀಡಿರಲಿಲ್ಲ. 40 ವರ್ಷಗಳ ಸುದೀರ್ಘ ಅಂತರದ ನಂತರ ರಾಜ್ಯದ ಮುಖ್ಯಸ್ಥರ ಅಧಿಕೃತ ಭೇಟಿಯನ್ನು ನಿರೀಕ್ಷಿಸಿದ್ದ ಬ್ರಿಟಿಷ್ ಕನ್ನಡಿಗರು ತೀವ್ರ ನಿರಾಸೆಗೊಂಡಿದ್ದಾರೆ.