ಮುಖ್ಯಮಂತ್ರಿಗಳಿಗೆ ಕಲ್ಯಾಣ ಕರ್ನಾಟಕ ಈಡಿಗ ಬಿಲ್ಲವರ ಒತ್ತಾಯ

ಕಲಬುರಗಿ:ಸೆ.16:ಕರ್ನಾಟಕದ ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗ- ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಘೋಷಿಸಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಕೂಡಲೇ ಕಲ್ಯಾಣ ಕರ್ನಾಟಕ ಭಾಗದವರನ್ನು ಅಧ್ಯಕ್ಷರಾಗಿ ನೇಮಿಸಿ 500 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡುವಂತೆ ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿ ಒತ್ತಾಯಿಸಿದೆ.

       ಸ್ವಾತಂತ್ರ್ಯ ಬಂದು  75 ವರ್ಷ ಸಂದರೂ ಈ ಸಮುದಾಯವು ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು ಸಮುದಾಯದ ಜನರ ಪ್ರಗತಿಗಾಗಿ ನಿಗಮವನ್ನು ತಕ್ಷಣ ಪ್ರಾರಂಭಿಸಿ ಕಾರ್ಯಾರಂಭಗೊಳಿಸಲು ಮುಖ್ಯಮಂತ್ರಿಗಳು ಆದೇಶ ನೀಡಬೇಕಾಗಿ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
              ರಾಜ್ಯದಲ್ಲಿ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಕುಲಕಸುಬನ್ನು ಸರಕಾರವು ಕಿತ್ತುಕೊಂಡು ಪುನರ್ವಸತಿ ಕಲ್ಪಿಸದೆ ಈ ಸಮುದಾಯದ ಜನರು ಅಕ್ಷರಶಃ ಬೀದಿ ಪಾಲಾಗಿದ್ದು ಇವರ ಪ್ರಗತಿಗಾಗಿ ನಿಗಮದ ಮೂಲಕ 500 ಕೋಟಿ ನೀಡಿ, ನಿರ್ದೇಶಕರನ್ನು ನೇಮಿಸಿ ಸಾಮಾಜಿಕ ಬೆಳವಣಿಗೆಗೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.      .

ಕರ್ನಾಟಕದಲ್ಲಿ 36,000 ಕೋಟಿ ರೂಪಾಯಿ ಅಬಕಾರಿ ಹಣವನ್ನು ಸರಕಾರಕ್ಕೆ ಒದಗಿಸುವ ಈ ಸಮುದಾಯಕ್ಕೆ ನಿಗಮದ ಮೂಲಕ ಹಣ ಮಂಜೂರು ಮಾಡಲು ಹಿಂದೇಟು ಹಾಕಬಾರದು ಮತ್ತು ತಕ್ಷಣದಲ್ಲಿ ನಿರ್ದೇಶಕರ ನೇಮಕ ಮಾಡಿ ನಿಗಮವು ಕಾರ್ಯ ಪ್ರಾರಂಭಿಸಬೇಕು. ಅತ್ಯಂತ ಹಿಂದುಳಿದ ಈ ಜನ ಸಮುದಾಯದ ಆರ್ಥಿಕ ಪ್ರಗತಿಗಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಸತಿ ಶಾಲೆಯನ್ನು ಪ್ರತಿ ಜಿಲ್ಲೆಗಳಲ್ಲಿ ತೆರೆದು ಅದರಲ್ಲಿ ಶೇಕಡ 50ರಷ್ಟು ಸೀಟುಗಳನ್ನು ಈ ಸಮುದಾಯಕ್ಕೆ ಮೀಸಲಿಡುವಂತೆ ಕೂಡ ಒತ್ತಾಯಿಸಿದ್ದಾರೆ. ಈ ಸಮುದಾಯದ ಕುಲ ಶಾಸ್ತ್ರೀಯ ಅಧ್ಯಯನಕ್ಕೆ ಹಿಂದಿನ ಸರಕಾರ ಒಪ್ಪಿಗೆ ನೀಡಿದ್ದು ತಕ್ಷಣ ಅದನ್ನು ಪ್ರಾರಂಭಿಸಲು ಮುಖ್ಯಮಂತ್ರಿಗಳು ಆದೇಶ ನೀಡಬೇಕು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವನ್ನು ಪ್ರಾರಂಭಿಸಲು ಆದೇಶ ಹೊರಡಿಸಬೇಕು. ಸರಕಾರವು ಈಡಿಗ – ಬಿಲ್ಲವ ಸೇರಿದಂತೆ 26 ಪಂಗಡಗಳ ಜೊತೆಗೆ ಅತಿ ಹಿಂದುಳಿದವರಿಗೆ ಹೆಚ್ಚಿನ ಒತ್ತನ್ನು ಕೊಟ್ಟು ಸರಕಾರವು ಈ ಜನ ಸಮುದಾಯದಲ್ಲಿ ವಿಶ್ವಾಸವನ್ನು ತುಂಬಬೇಕು. ಈಗಾಗಲೇ ಚಿತ್ತಾಪುರ ತಾಲೂಕಿನ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯರಾದ ಡಾ. ಪ್ರಣವಾನಂದ ಶ್ರೀಗಳು ಸರಕಾರಕ್ಕೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದು ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ನ್ಯಾಯ ಒದಗಿಸಬೇಕು. ಬಿಜೆಪಿ ಆಡಳಿತ ವಿದ್ದ ಸಮಯದಲ್ಲಿ ಪ್ರತಿಪಕ್ಷದಲ್ಲಿ ಇದ್ದ ಕಾಂಗ್ರೆಸ್ ಪಕ್ಷವು ಡಾ. ಪ್ರಣವಾನಂದ ಸ್ವಾಮೀಜಿಯವರ ಪಾದಯಾತ್ರೆ ಸಂದರ್ಭದಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದರೆ ಈ ಸಮುದಾಯದ ಬೇಡಿಕೆಯನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿ ವಿಶ್ವಾಸ ತುಂಬಿದ್ದನ್ನು ಇಲ್ಲಿ ಸ್ಮರಿಸಬೇಕು. ಕಲ್ಬುರ್ಗಿ ಜಿಲ್ಲೆಯ ಮಾನ್ಯ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಡಾ. ಶರಣಪ್ರಕಾಶ್ ಪಾಟೀಲ್ ಅವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಈ ಸಮುದಾಯದ ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕರಾವಳಿ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈ ಸಮುದಾಯಕ್ಕೆ ಪ್ರತಿ ವರ್ಷ 250 ಕೋಟಿ ರೂಪಾಯಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದನ್ನು ಈ ಸರಕಾರ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.