ಮುಖ್ಯಮಂತ್ರಿಗಳಿಂದ ವಿಡಿಯೋ ಸಂವಾದ ಮೂಲಕ ಪರಿಶೀಲನಾ ಸಭೆ: ಸೋಂಕಿತರ ಪತ್ತೆ ಹಚ್ಚಿ ಮರಣ ಪ್ರಮಾಣ ತಗ್ಗಿಸಲು ಸೂಚನೆ

ವಿಜಯಪುರ, ಮೇ.30-ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಮೈಸೂರು, ಹಾಸನ, ಬೆಳಗಾವಿ, ವಿಜಯಪುರ, ಕಲಬುರಗಿ, ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕೋವಿಡ್ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರನ್ನು ಆದ್ಯತೆ ಮೇಲೆ ಗುರುತಿಸಬೇಕು. ಸಕಾಲಕ್ಕೆ ಅಂತಹವರಿಗೆ ಚಿಕಿತ್ಸೆ ಒದಗಿಸಿಕೋಡುವ ಮೂಲಕ ಕೋವಿಡ್ ಮರಣ ಪ್ರಮಾಣ ಕಡಿಮೆ ಮಾಡಬೇಕು. ಕೋವಿಡ್ ಎರಡನೇ ಅಲೆ ತೀವ್ರವಾಗಿ ಬಾಧಿಸಿದೆ. ಕೋವಿಡ್ ಪ್ರಕರಣಗಳು ಇತ್ತೀಚಿಗೆ ಕಡಿಮೆ ಬರುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ. ಇದಕ್ಕಾಗಿ ಶ್ರಮಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.
ಆದರೂ ಕೂಡ ನಾವೆಲ್ಲರೂ ಕೈಕಟ್ಟಿ ಕುಳಿತುಕೊಳ್ಳುವ ಹಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬರುತ್ತಿರುವುದರಿಂದ ಹೆಚ್ಚಿನ ಗಮನ ನೀಡಬೇಕು. ಹೋಂ ಐಸೋಲೇಶನ್, ಕೋವಿಡ್ ಕೇರ್ ಸೆಂಟರ್ ಗೆ ಹಾಗೂ ಕೋವಿಡ್ ಆಸ್ಪತ್ರೆಗಳಿಗೆ ರೋಗಿಗಳನ್ನು ಸಕಾಲಕ್ಕೆ ಚಿಕಿತ್ಸೆಗೆ ಒಳಪಡಿಸಿ ಮರಣ ಪ್ರಮಾಣ ಕಡಿಮೆಗೊಳಿಸಬೇಕು. ಆಯಾ ಜಿಲ್ಲೆಯ ಆಸ್ಪತ್ರೆಗಳಲ್ಲಿ ನಿಗದಿತ ಔಷಧಿ, ಆಮ್ಲಜನಕ, ಇತರೆ ಉಪಕರಣಗಳು ಹಾಗೂ ಸಂಪನ್ಮೂಲಗಳ ಸಮರ್ಪಕವಾಗಿ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ನಮ್ಮ-ನಿಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸಂವಾದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲಾಕ್ ಪಂಗಸ್ (ಕಪ್ಪು ಶೀಲಿಂದ್ರ) ರೋಗಿಗಳಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲು ನಿಗದಿತ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಹಾಗೂ ಅಂತಹ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಿದರೂ ಕೂಡ ಔಷಧಿಗಳ ಕೊರತೆ ಇರುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಮನಕ್ಕೆ ತರಲಾಗಿದೆ ,ಈ ಕುರಿತು ಮಾನ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಎಲ್ಲ ಗಮನಕ್ಕೆ ತಂದರು.
ಅದರಂತೆ ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ವಿವಿಧ ಕಾರ್ಯಗಳು ನಡೆದಿದ್ದು, ನೀರು, ವಿದ್ಯುತ್, ಚರಂಡಿ, ಸೌಲಭ್ಯ ಕಾಮಗಾರಿಗಳು ಆರಂಭಗೊಂಡಿವೆ. ಈ ಕುರಿತು ಇಬ್ಬರು ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದು ಆಸ್ಪತ್ರೆಯ ಇತರ ಚಟುವಟಿಕೆಗಳು ಸಹ ಕೈಗೊಳ್ಳುವ ಬಗ್ಗೆ ಕ್ರಮ ಆಗಲಿದೆ . ಅದರಂತೆ ಇತ್ತೀಚಿಗೆ ನಗರ ಶಾಸಕರು, ವಿಧಾನಪರಿಷತ್ ಸದಸ್ಯರು, ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನು ಒಳಗೊಂಡ ನಿಯೋಗವು ಕೂಡ ರಾಜ್ಯ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಜಿಲ್ಲೆಯ ಎಲ್ಲಾ ಸ್ಥಿತಿಗತಿಗಳ ಬಗ್ಗೆ, ತೊಂದರೆಗಳ ಬಗ್ಗೆ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸುಮಾರು 100 ಬ್ಲ್ಯಾಕ್ ಫಂಗಸ್ ರೋಗಿಗಳಿದ್ದಾರೆ. ರಾಜ್ಯದಲ್ಲಿ ಅಂದಾಜು 3000 ಇಂತಹ ರೋಗಿಗಳು ಇರುವ ಬಗ್ಗೆ ಅಂದಾಜಿಸಲಾಗಿದ್ದು, ಪ್ರತಿದಿನ 15000 ಪ್ರತಿರೋಧಕ ಫಂಗಲ್ ಇಂಜೆಕ್ಷನ್ ಗಳ ಬೇಡಿಕೆ ಇರುವುದರಿಂದ ಈ ಕುರಿತು ವಿಶೇಷ ಗಮನಹರಿಸಬೇಕು. ಜಿಲ್ಲೆಗೆ ಈ ಲಸಿಕೆ, ಔಷಧಿ,ಅಗತ್ಯವಿದ್ದು ಚಿಕಿತ್ಸೆಗಾಗಿ ತುರ್ತಾಗಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲು ಮತ್ತು ಇತ್ತೀಚಿಗೆ ಬಡ ವರ್ಗಗಳಿಗೆ ಸರ್ಕಾರ ಘೋಷಿಸಿದ ಪ್ಯಾಕೇಜ್ ದಲ್ಲಿ ಕೆಲವು ವರ್ಗಗಳು ಕೈಬಿಟ್ಟಿದ್ದು ಅವುಗಳ ಕುರಿತು ಕ್ರಮ ಕೈಗೊಳ್ಳಲು ತಿಳಿಸಿದರು.
ಶಾಸಕ ಶಿವಾನಂದ, ಪಾಟೀಲ್ ಅವರು ಮಾತನಾಡಿ ತಮ್ಮ ಕಾಲಾವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚುವರಿ ನಿರ್ದೇಶಕರ ನೇಮಕವನ್ನು ಮಾಡಲಾಗಿತ್ತು. ಈಗ ಪುನಃ ಬೆಂಗಳೂರಿಗೆ ಅವರನ್ನು ಪಡೆದಿರುವುದರಿಂದ ಈ ಕುರಿತು ಗಮನಹರಿಸಬೇಕು. ಉತ್ತರ ಕರ್ನಾಟಕಕ್ಕೆ ಅಂಕಿಅಂಶ ಆಧಾರದ ಮೇಲೆ ಕೋವಿಡ್‍ಗೆ ನಿಗದಿತ ಔಷಧಿ ಪೂರೈಸಬೇಕು ಎಂದು ಅವರು ತಿಳಿಸಿದರು.
ಶಾಸಕ ಎಂ.ಬಿ. ಪಾಟೀಲ್ ಅವರು ಬ್ಲ್ಯಾಕ್ ಫಂಗಸ್ ರೋಗಿಗಳ ಅನುಕೂಲಕ್ಕಾಗಿ ನಿಗದಿತ ಔಷಧಿ, ಲಸಿಕೆಯನ್ನು ಆದ್ಯತೆ ಮೇಲೆ ಪೂರೈಸಬೇಕು. ಕೋವಿಡ್ ನಂತರ ಪರೀಕ್ಷೆಯಲ್ಲಿ ಬ್ಲ್ಯಾಕ್ ಫಂಗಸ್ ನಿಂದ ಹೆಚ್ಚಿಗೆ ಸಾವು ಆಗುತ್ತಿದ್ದು, ತಕ್ಷಣ ತಾಂತ್ರಿಕ ಸಮಿತಿ (ತಂಡ)ಗಳ ಮೂಲಕ ಸೂಕ್ತ ಮಾರ್ಗದರ್ಶನವನ್ನು ಚಿಕಿತ್ಸಾ ಸಂದರ್ಭದಲ್ಲಿ ಮತ್ತು ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಮಾರ್ಗದರ್ಶನ ನೀಡಿ ಕೋವಿಡ್ ನಂತರ ಸಾವುಗಳನ್ನು ತಪ್ಪಿಸಲು ನೆರವು ಆಗುವಂತೆ ತಿಳಿಸಿ, ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾಡಳಿತದಿಂದ ಅತ್ಯುತ್ತಮ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಕೋವಿಡ್ ನಿಂದಾಗಿ ಹಲವು ಕುಟುಂಬಗಳಲ್ಲಿ ಮಧ್ಯೆ ವಯಸ್ಕ ಸದಸ್ಯರು ಸಾವನ್ನಪ್ಪಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು,ಅಂತಹ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಿಕೊಡಲು ಹಾಗೂ ಮುಂದಿನ ಆಯವ್ಯಯದಲ್ಲಿ ಜನರ ಜೀವ ರಕ್ಷಣೆಗಾಗಿ ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲು ಕೋರಿ ಇತ್ತೀಚಿಗೆ ಜಲಧಾರೆ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಈ ಭಾಗದಲ್ಲಿ ನೀರಿನ ಶಾಶ್ವತ ಪರಿಹಾರಕ್ಕೆ ನಿರ್ಣಯ ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಮುದ್ದೇಬಿಹಾಳ ಶಾಸಕ ಶ್ರೀ ನಡಹಳ್ಳಿ ಅವರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ 1.5 ಕೋಟಿ ರೂಪಾಯಿ ಬಿಡುಗಡೆಗೆ ಕೋರಿದಾಗ ಮಾನ್ಯ ಮುಖ್ಯಮಂತ್ರಿಗಳು ಇದಕ್ಕೆ ತಕ್ಷಣ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಶಾಸಕರು ಸಭೆಯಲ್ಲಿ 20 ಆಕ್ಸಿಜನ್ ಕಾನ್ಸನ್ ಟ್ರೇಟರ್ ತಾಳಿಕೋಟೆಯಲ್ಲಿ ಆಕ್ಸಿಜನ್ ಸೆಂಟರ್, 150 ಜಂಬೋ ಸಿಲಿಂಡರ್, 10 ಐ.ಸಿ.ಯು ಬೆಡ್ ಮತ್ತು ಇತರೆ ಬೇಡಿಕೆಗಳ ಬಗ್ಗೆ ಗಮನಕ್ಕೆ ತಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ ಮಾತನಾಡಿದರು. ಅರುಣ್ ಶಹಾಪುರ್, ದೇವರ ಹಿಪ್ಪರಗಿ ಶಾಸಕರಾದ ಸೋಮನಗೌಡ ಪಾಟೀಲ್ ಸಾಸನೂರ್, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ್, ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು