ಮುಕ್ತ ಹಾಗೂ ನಿಷ್ಪಕ್ಷಪಾತ ಮತದಾನ ಮಾಡಿ

ರಾಯಚೂರು,ಮೇ.೦೫- ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಯಾವುದೇ ಅಕ್ರಮಗಳು ಕಂಡು ಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಪ್ರತಿಯೊಬ್ಬರು ಮತದಾನ ಮಾಡಿ, ಶೇಕಡಾ ೧೦೦ ರಷ್ಟು ಮತದಾನದ ಗುರಿ ತಲುಪಬೇಕೆಂದು ಮನವಿ ಮಾಡುವುದರೊಂದಿಗೆ ಯಾವುದೇ ಆಸೆ-ಆಮಿಷ, ಒತ್ತಡ ತಂತ್ರಗಳಿಗೆ ಒಳಗಾಗದೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಪೋಷಿಸುವ ನಿಟ್ಟಿನಲ್ಲಿ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ೧೮ ವರ್ಷ ಪೂರೈಸಿರುವ ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಜಿಡಳಿತ, ಜಿ ಪಂಚಾಯತ್, ಜಿ ಸ್ವೀಪ್ ಸಮಿತಿ ರಾಯಚೂರು, ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ ಎಂದು ಮತದಾರರ ಜಾಗೃತಿ ಅಭಿಯಾನ ಮೂಲಕ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ.ಎಂ ಅವರು ಮಾತನಾಡಿ, ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಮತದಾನವೆಂಬುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಪ್ರತಿಯೊಬ್ಬರು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ಬಲಪಡಿಸಿದಂತಾಗುತ್ತದೆ. ನಮ್ಮವರು ತಮ್ಮವರು ಎನ್ನದೇ ಜವಾಬ್ದಾರಿಯುತ ವ್ಯಕ್ತಿಗೆ ಮತದಾನ ಮಾಡುವುದು ಒಳಿತು ಆಸೆ-ಆಮಿಷೆಗಳಿಗೆ ಒಳಗಾಗಿ ನಿಮ್ಮನ್ನು ನೀವು ಮಾರಿಕೊಂಡರೆ ನಿಮ್ಮತನವೇ ಕಳೆದುಕೊಂಡ ಹಾಗೆ ಮತದಾನದಿಂದ ದೂರ ಉಳಿದರೆ ಯಾವುದೇ ಮುಂದಿನ ಸಮಸ್ಯೆಗಳಿಗೆ ಸವಾಲುಗಳಿಗೆ ದೂಷಿಸುವ ಹಕ್ಕು ಇರುವುದಿಲ್ಲ ಹಾಗಾಗಿ ಒಂದೊಂದು ಮತ ಅಮೂಲ್ಯವಾದದ್ದು ಅದನ್ನು ಸರಿಯಾಗಿ ಬಳಸಿ ಎಂದು ಹೇಳಿದರು.
ರಾವಿವಿಯ ಕುಲಸಚಿವ ಮೌಲ್ಯಮಾಪನ ಪ್ರೊ.ಯರಿಸ್ವಾಮಿ.ಎಂ., ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಕಾಲೇಜು ಶಿಕ್ಷಣ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾಘವೇಂದ್ರ ಫತ್ತೇಪುರ, ಸಮಾಜ ವಿಜ್ಞಾನ ನಿಕಾಯ ಡೀನರಾದ ಪ್ರೊ.ನುಸ್ರತ್ ಫಾತಿಮಾ, ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಕಲಾ ಮತ್ತು ಶಿಕ್ಷಣ ನಿಕಾಯ ಡೀನರಾದ ಪ್ರೊ.ಪಿ.ಭಾಸ್ಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರೇಮಕುಮಾರ ತಂಡದಿಂದ ಮತದಾನ ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶಿಸಲಾಯಿತು.
ರಾವಿವಿಯ ಹಣಕಾಸು ಅಧಿಕಾರಿ ನಾಗರಾಜ ನಾಯಕ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು, ಉಪಕುಲಸಚಿವ ಹಾಗೂ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ ಸ್ವಾಗತಿಸಿದರು, ಸಮಾಜಕಾರ್ಯ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ರಶ್ಮೀರಾಣಿ ಅಗ್ನಿಹೋತ್ರಿ ಪ್ರಾರ್ಥಿಸಿದರು. ಅರ್ಥಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ದುರುಗಪ್ಪ ಗಣೇಕಲ್ ನಿರೂಪಿಸಿದರು. ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಡಾ.ಶರಣಪ್ಪ ಛಲುವಾದಿ ವಂದಿಸಿದರು. ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.