ಮುಕ್ತ ವಿಶ್ವವಿದ್ಯಾನಿಲಯದಿಂದ ಉನ್ನತ ಶಿಕ್ಷಣ ಮನೆ ಬಾಗಿಲಿಗೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ ಆ. 8; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಜಿಲ್ಲೆಯಲ್ಲಿ ಕೈಗೊಂಡಿರುವ “ಕರಾಮುವಿ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನ” ಕ್ಕೆ ಡಾನ್ ಬೋಸ್ಕೋ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಚೋಮನ್ ಕೆ.ಜೆ. ಶನಿವಾರದಂದು ಡಾನ್ ಬೋಸ್ಕೋ ಪದವಿ ಕಾಲೇಜು ಆವರಣದಲ್ಲಿ ಚಾಲನೆ ನೀಡಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು “ಕರಾಮುವಿ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನ” ಮೂಲಕ ಎಲ್ಲ ಜಿಲ್ಲೆಗಳಲ್ಲೂ ಎಲ್‍ಇಡಿ ಪರದೆಯುಳ್ಳ ಪ್ರಚಾರ ಆಂದೋಲನ ವಾಹನ ಮೂಲಕ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕಾರ್ಯಕ್ರಮಗಳು, ಕೋರ್ಸ್‍ಗಳು, ಅಧ್ಯಯನ ವಿಷಯಗಳು, ಶುಲ್ಕ ರಿಯಾಯಿತಿ, ಉಚಿತ ಪ್ರವೇಶಾತಿ ಬಗ್ಗೆ ಹಾಗೂ ಇನ್ನಿತರ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.  ಉನ್ನತ ಶಿಕ್ಷಣದಿಂದ ವಂಚಿತರಾದ ಸಮಾಜದ ವಿವಿಧ ವರ್ಗದ ಜನರಿಗೆ ವಿದ್ಯಾಭ್ಯಾಸ ಮುಂದುವರೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೀಡುತ್ತಿರುವ ಸುವರ್ಣಾವಕಾಶವನ್ನು ಜಿಲ್ಲೆಯ ಜನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕರಾಮುವಿ ಯಿಂದ ದೊರೆಯುತ್ತಿರುವ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಡಾನ್ ಬೋಸ್ಕೋ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಫಾದರ್ ಸಜ್ಜಿ ಜಾರ್ಜ್ ಅವರು ವಿವರಿಸಿದರು.ಕರಾಮುವಿ ಚಿತ್ರದುರ್ಗ ಜಿಲ್ಲೆಯ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ರಾಧಿಕಾ ಬಿ.ಆರ್. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.