ಮುಕ್ತ ವಿವಿಗೆ ಬೆಳ್ಳಿಹಬ್ಬದ ಸಂಭ್ರಮ

ಬೀದರ:ಜೂ.3: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ 1996ರ ಮೇ ಮಾಹೆಯಲ್ಲಿ ಅಸ್ಥಿತ್ವಕ್ಕೆ ಬಂದು ಇಂದು 25 ವರ್ಷ ಪೂರೈಸಿ, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.
ಕಾರಣಾಂತರಗಳಿಂದ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿ, ನಂತರ ಓದಬೇಕೆಂಬ ತುಡಿತವಿರುವ ಲಕ್ಷಾಂತರ ವಿಧ್ಯಾರ್ಥಿಗಳ ಓದಿನ ಹಸಿವನ್ನು ನೀಗಿಸಿ ಬದುಕು ಕಟ್ಟಿಕೊಳ್ಳಲು ವಿಶ್ವವಿದ್ಯಾನಿಲಯವು ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಈ ಕೊಡುಗೆಯಲ್ಲಿ ಹಲವಾರು ಕುಲಪತಿಗಳು, ಅಧಿಕಾರಿಗಳು ಬೋಧಕ/ಬೋಧಕೇತರ ಸಿಬ್ಬಂಧಿಗಳ ಪಾಲೂ ಇದೆ. ಮೊದಲೆಲ್ಲಾ ವಾರ್ಷಿಕ 40-50 ಸಾವಿರ ಪ್ರವೇಶಾತಿ ಪಡೆಯುತ್ತಿದ್ದ ವಿವಿ, ಯುಜಿಸಿ ಮಾನ್ಯತೆ ರದ್ದಿನಿಂದಾಗಿ ಪ್ರವೇಶಾತಿಯಲ್ಲಿ ಭಾರಿ ಇಳಿಕೆ ಕಾಣಬೇಕಾಯಿತು. ಆದರೀಗ, ದೂರಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾನಿಲಯ ಎಂಬ ಘೋಷಣೆಯ ನಂತರ ಪ್ರವೇಶಾತಿ ಮೊದಲಿನ ಲಯಕ್ಕೆ ಬರುತ್ತಿರುವುದು ಹರ್ಷದಾಯಕ ಸಂಗತಿ ಆಗಿದೆ.
ಇಂದಿನ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಅವರು ಅಧಿಕಾರ ವಹಿಸಿಕೊಂಡು 2 ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೆ ವಿವಿಯ ಕಾರ್ಯ ಚಟುವಟಿಕೆಯ ರೂಪುರೇಷೆಗಳನ್ನೇ ಬದಲಿಸಿ ಹೊಸ ಮೆರಗು ತಂದು ಕೊಡುವುದರ ಜೊತೆಗೆ, ಕೊರೊನ ಕಾಲದಲ್ಲೂ, ಕೊವಿಡ್ ಗೆ ಸೆಡ್ಡು ಹೊಡೆದು ವಿವಿಯನ್ನು ಸಂಪೂರ್ಣ ಡಿಜಿಟಲೀಕರಣದತ್ತ ಸಜ್ಜುಗೊಳಿಸಲಾಗುತ್ತಿದೆ. ವಿವಿಯು ಶೈಕ್ಷಣಿಕವಾಗಿ ಮಾತ್ರವಲ್ಲದೆ, ಮಂಡಕಳ್ಳಿ ಬಳಿಯ ಕರಾಮುವಿ ಬೃಹತ್ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಅಲ್ಲಿಗೆ ಲಕ್ಷಾಂತರ ರೂಗಳ ಆಕ್ಸಿಜನ್ ಕಾನ್ಸಂನ್ಟ್ರೇಟರ್ ಹಾಗು ಆಕ್ಸಿಜನ್ ಮಾಸ್ಕ್ ಕೊಡುಗೆ ನೀಡಿದೆ. ಜೊತೆಗೆ, ಉಚಿತವಾಗಿ ಸಾವಿರಾರು ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಕೊರೊನ ಜಾಗೃತಿ ಮೂಡಿಸಿದೆ. ಕಳೆದ ವರ್ಷ ಕೊರೊನ ವಾರಿಯರ್ಸ್ ಗೆ ಅಭಿನಂದಿಸಿ ಪೆÇ್ರೀತ್ಸಾಯಿಸಿತ್ತು. ಹೀಗೆ, ಹತ್ತು ಹಲವು ಕಾರ್ಯಕ್ರಮ ರೂಪಿಸಿ ಸಾಮಾಜಿಕವಾಗಿಯೂ ಬದ್ಧತೆಯನ್ನೂ ತೋರಿದೆ. ಇವೆಲ್ಲದರ ನಡುವೆ ಕೊರೊನದಿಂದ ಇತ್ತೀಚೆಗೆ ಮೃತಪಟ್ಟ ವಿವಿ ನಿಲಯದ ತಾತ್ಕಾಲಿಕ ನೌಕರರಾದ ಶಿವಶಂಕರ್ ಮತ್ತು ಸಂತೋಷ್ ಕುಟುಂಬಕ್ಕೆ ಕುಲಪತಿಗಳು ಕೆಲಸ ನೀಡುವುದಾಗಿ ಹೇಳಿ ಮಾನವೀಯತೆಯನ್ನು ಮೆರೆದಿದ್ದಾರೆ.
ಹೀಗಾಗಿ, ಕುಲಪತಿಗಳಿಗೆ ಶುಭಾಷಯ ಕೋರುತ್ತಾ, ವಿವಿಯ 25ನೇ ವರ್ಷದ ಸಂಭ್ರಮದ ಹಲವಾರು ಯೋಜನೆಗಳಲ್ಲಿ ತಾತ್ಕಾಲಿಕ ನೌಕರರಿಗೆ ಒಳ್ಳೆಯ ಕೊಡುಗೆಯೂ ಸೇರಿರಲಿ ಎಂದು ಆಶಿಸಿ, ವಿವಿಗೆ ಸಕಲ ಶುಭಗಳೂ ಲಭಿಸಲಿ ಎಂದು ಪ್ರಕಟಣೆಯಲ್ಲಿ ಕೋರಿರುತ್ತಾರೆ.