ಚಿತ್ರದುರ್ಗ ಮಾ. 31; ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು, ವಿವಿಧ ಉದ್ಯಮದವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಅಗತ್ಯ ಮಾಹಿತಿ ನೀಡುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲು, ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಭರಣ ತಯಾರಕರು, ಆಭರಣ ಮಾರಾಟಗಾರರು, ಹೋಟೆಲ್, ಲಾಡ್ಜಸ್, ಕಲ್ಯಾಣಮಂಟಪಗಳು, ಬೋರ್‍ವೆಲ್ಸ್ ಪೆಟ್ರೋಲ್‍ಬಂಕ್ ಮಾಲೀಕರು ಇತ್ಯಾದಿ ಉದ್ಯಮದವರೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದರ ಕಟ್ಟುನಿಟ್ಟಿನ ಜಾರಿಗಾಗಿ ನಾವು ಸ್ಟ್ಯಾಟಿಕ್ ಸರ್ವೆಲೆನ್ಸ್, ಫ್ಲೈಯಿಂಗ್ ಸ್ಕ್ವಾಡ್, ವಿಎಸ್‍ಟಿ ಸೇರಿದಂತೆ ವಿವಿಧ ತಂಡಗಳನ್ನು ರಚಿಸಿ, ಅವರು ಈಗಾಗಲೆ ಕ್ಷೇತ್ರಗಳಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಎಲ್ಲ ಚಟುವಟಿಕೆಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ತಮ್ಮ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಗಳಿರುವುದರಿಂದ, ಆಭರಣ ತಯಾರಕರು, ಆಭರಣ ಮಾರಾಟಗಾರರು, ಹೋಟೆಲ್, ಲಾಡ್ಜಸ್, ಕಲ್ಯಾಣಮಂಟಪಗಳು, ಲೇವಾದೇವಿದಾರರು, ಬೋರ್‍ವೆಲ್ಸ್ ಪೆಟ್ರೋಲ್‍ಬಂಕ್ ಮಾಲೀಕರು ಮುಂತಾದ ಉದ್ಯಮ ನಡೆಸುವವರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಅಥವಾ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಅಕ್ರಮ ಚಟುವಟಿಕೆಗಳಿಗೆ ಯಾವುದೇ ಆಮಿಷ ಒಡ್ಡುವುದು, ತಮ್ಮ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುವವರ ಬಗ್ಗೆ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಅಥವಾ ಎಂಸಿಸಿ ನೋಡಲ್ ಅಧಿಕಾರಿಗಳಾದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡುವ ಮೂಲಕ ಅಕ್ರಮಗಳನ್ನು ತಡೆಗಟ್ಟಲು ನೆರವಾಗಬೇಕು. ಮಾಹಿತಿಯನ್ನು ಮುಚ್ಚಿಟ್ಟು, ಯಾರಾದರೂ ಅಕ್ರಮ ಚಟುವಟಿಕೆಗಳಿಗೆ ಸಹಕರಿಸಿದಲ್ಲಿ, ಅಂತಹವರ ವಿರುದ್ಧ ವಿವಿಧ ಕಾನೂನುಗಳಡಿ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಇದಕ್ಕಾಗಿಯೇ ತಮಗೆ ಅರಿವು ಮೂಡಿಸಲು ನಾವು ಸಭೆ ನಡೆಸಿ, ತಿಳಿಸುತ್ತಿದ್ದೇವೆ. ಮತದಾನದ ದಿನದಂದು ಎಲ್ಲ ಉದ್ಯಮದವರು ತಮ್ಮಲ್ಲಿನ ಸಿಬ್ಬಂದಿ ಮತ್ತು ನೌಕರರಿಗೆ ಸುಗಮ ಮತದಾನಕ್ಕೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.