ಮುಕ್ತ ನ್ಯಾಯಸಮ್ಮತ ಪಾರದರ್ಶಕÀ ಚುನಾವಣೆ ನಡೆಸೋಣ: ರಾಮಚಂದ್ರನ್ ಆರ್

ಬೀದರ್ ಏ 07: 47-ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನೇಮಕವಾಗಿರುವ 400 ಮತಗಟ್ಟೆ ಅಧಿಕಾರಿಗಳು ಮತ್ತು 400 ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಇನ್ನೀತರ ಸಿಬ್ಬಂದಿಗೆ ಮೊದಲನೇ ಹಂತದ ಪೂರ್ವಭಾವಿ ತರಬೇತಿಯು ನಗರದ ಪೂಜ್ಯ ಶ್ರೀ ಡಾ.ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಏಪ್ರಿಲ್ 06 ರಂದು ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ನಿಯಮಾನುಸಾರ ನಡೆಸಬೇಕು. ಚುನಾವಣೆಗೆ ಸಂಬಂಧಿಸಿದ ಕಾಯ್ದೆ, ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಏಪ್ರೀಲ್ 17ರಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಎಲ್ಲ ಸಿಬ್ಬಂದಿ ಸಿದ್ಧರಿರಬೇಕು. ಬೆಳಗ್ಗೆ 6.30ರೊಳಗೆ ಕನಿಷ್ಟ 50 ಮತಗಳಿಂದ ಅಣಕು ಮತದಾನ ಮುಗಿಸಬೇಕು. ಬೆಳಗ್ಗೆ 7ಕ್ಕೆ ಮತದಾನ ಪ್ರಾರಂಭಿಸಿ ಪ್ರತಿ ಎರಡು ಗಂಟೆಗೊಮ್ಮೆ ಎಷ್ಟು ಮತದಾನ ಆಗಿದೆ ಎಂಬ ಮಾಹಿತಿಯನ್ನು ಪ್ರಿಸೈಡಿಂಗ್ ಅಧಿಕಾರಿಯವರು ಡೈರಿಯಲ್ಲಿ ನಮೂದಿಸಬೇಕು. ಸಂಜೆ 7 ಗಂಟೆಗೆ ಮತದಾನವನ್ನು ಮುಕ್ತಾಯಗೊಳಿಸಬೇಕು. ಮತದಾರರು ಇನ್ನೂ ಬಾಕಿ ಇದ್ದಲ್ಲಿ ಸಾಲಿನಲ್ಲಿರುವವರಿಗೆ ಕೊನೆಯಿಂದ ಕ್ರಮ ಸಂಖ್ಯೆ ಚೀಟಿ ನೀಡಿ ಮತದಾನಕ್ಕೆ ಅವಕಾಶ ನೀಡಬೇಕು ಎನ್ನುವ ನಿಯಮವನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಮತದಾನ ಮುಕ್ತಾಯವಾದ ಬಳಿಕ, ದಾಖಲಿಸಿದ ಮತ ಪತ್ರಗಳ ಮಾಹಿತಿಯನ್ನು ಪ್ರಪತ್ರ 17 ಸಿ ನಮೂನೆಯಲ್ಲಿ ತಯಾರಿಸತಕ್ಕದ್ದು. ಪೊಲಿಂಗ್ ಏಜೆಂಟರುಗಳ ಸಹಿ ಪಡೆದು ಮತಯಂತ್ರ ಸೀಲ್ ಮಾಡತಕ್ಕದ್ದು ಎಂದು ತಿಳಿಸಿದರು.
ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ ಮತ್ತು ಮೂರನೇ ಮತಗಟ್ಟೆ ಅಧಿಕಾರಿಗಳು ನಿಗದಿಪಡಿಸಿದ ಮಸ್ಟರಿಂಗ್ ಕೇಂದ್ರದಲ್ಲಿ ಏಪ್ರೀಲ್ 16ರಂದು ಬೆಳಗ್ಗೆ 8 ಗಂಟೆಗೆ ಹಾಜರಾಗಿ ಮತಗಟ್ಟೆ ಕೌಂಟರಗೆ ಎಲ್ಲಾ ಸಿಬ್ಬಂದಿಯೊಂದಿಗೆ ಹೋಗಿ ಮತಯಂತ್ರ ಮತ್ತು ಇತರೆ ಚುನಾವಣಾ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿವಿಪ್ಯಾಟ್ ಯುನಿಟ್‍ಗಳನ್ನು ತಮ್ಮ ತಮ್ಮ ಮತಗಟ್ಟೆಗೆ ಸಂಬಂಧಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅಳಿಸಲಾಗದ ಶಾಯಿ, ಸ್ಟ್ಯಾಂಪ್ ಪ್ಯಾಡ್, ಮತದಾರರ ಪಟ್ಟಿ, ಸ್ಪರ್ಧಾಕಣದಲ್ಲಿರುವ ಉಮೇದುವಾರರ, ಚುನಾವಣಾ ಏಜೆಂಟರುಗಳ ಮಾದರಿ ಸಹಿಯ ಪ್ರತಿಗಳು ಪಡೆದಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು.
ಮತಗಟ್ಟೆ ಕೊಠಡಿ ಪರಿಶೀಲಿಸಿ ಯಾವುದೇ ಧರ್ಮದ ಮತ್ತು ಇನ್ನೀತರ ಚಿತ್ರಗಳು ಚಿಹ್ನೆಗಳಿದ್ದಲ್ಲಿ ಅದನ್ನು ತೆಗೆಯಿಸಿ ಹಾಕಬೇಕು. ಮತಗಟ್ಟೆ ಒಳಗಡೆ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಮತ ಚಲಾಯಿಸುವ ಕಂಪಾರ್ಟಮೆಂಟ್ ಸಿದ್ಧಪಡಿಸಿಕೊಳ್ಳಬೇಕು. ಮತದಾರರು ಓಡಾಡುವ ಸ್ಥಳದಲ್ಲಿ ಬರದ ಹಾಗೆ ಸಿಯು ಮತ್ತು ಬಿಯು ಸೇರಿಸುವ ಕೇಬಲ್‍ನ್ನು ಸಮರ್ಪಕವಾಗಿ ಅಳವಡಿಸಬೇಕು. ಮತದಾನ ಏಜೆಂಟರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಸಬೇಕು ಎಂದು ಸವಿವರವಾಗಿ ತಿಳಿಸಿದರು.
ಮತಗಟ್ಟೆಯೊಳಗೆ ಮತದಾರರು, ಪೋಲಿಂಗ್ ಆಫೀಸರುಗಳು, ಚುನಾವಣಾ ಕರ್ತವ್ಯದ ಮೇಲಿರುವ ಸರ್ಕಾರಿ ನೌಕರರು ಸೇರಿದಂತೆ ಚುನಾವಣಾ ಆಯೋಗದ ನಿರ್ದೇಶನುಸಾರ ಅವಕಾಶ ನೀಡಿದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ನೀಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಅವರು ಮಾತನಾಡಿ, 17ಎ ರಜಿಸ್ಟರ್‍ನಲ್ಲಿ ಪ್ರತಿಯೊಬ್ಬ ಮತದಾರನ ಸಹಿ ಅಥವಾ ಹೆಬ್ಬೆಟ್ಟಿನ ಗುರುತು ತೆಗೆದುಕೊಳ್ಳಬೇಕು. ಎಡಗೈ ತೋರು ಬೆರಳಿನ ಉಗುರಿನ ತುದಿಯಿಂದ ಮೊದಲನೇ ಖಂಡಿಕೆಯವರೆಗೆ ಅಳಿಸಲಾಗದ ಶಾಹಿ ಹಾಕಬೇಕು ಎಂದು ತಿಳಿಸಿದರು.
ವಿಶೇಷ ಲಕೋಟೆಗಳು, ಶಾಸನಬದ್ಧ ಲಕೋಟೆಗಳು, ಶಾಸನಬದ್ಧವಲ್ಲದ ಲಕೋಟೆಗಳು, ಇತರೆ ಲಕೋಟೆಗಳು, ಡಿಮಸ್ಟರಿಂಗ್ ವಿಧಾನ ಮತ್ತು ಇನ್ನೀತರ ಮಾಹಿತಿ ನೀಡಿದರು. ಡಿಮಸ್ಟರಿಂಗ್ ಕೇಂದ್ರವನ್ನು ಬಿಡುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡು ಹೋಗತಕ್ಕದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ತಹಸೀಲ್ದಾರ ಗಂಗಾದೇವಿ ಸಿ.ಎಚ್., ಚುನಾವಣಾ ವಿಭಾಗದ ಇನ್ನೀತರ ಸಿಬ್ಬಂದಿ ಇದ್ದರು.