ಮುಕ್ತ ಚುನಾವಣೆಗೆ ಮತದಾರರ ಸಹಕಾರ ಅಗತ್ಯ:ಡಿವೈಎಸ್ಪಿ ಜೆ. ಎಸ್ ನ್ಯಾಮೇಗೌಡ

ಕಲಬುರಗಿ: ಮಾ.29:ಚುನಾವಣೆಯನ್ನು ನಿರ್ಭೀತಿಯಿಂದ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಮತದಾರರ ಸಂಪೂರ್ಣ ಸಹಕಾರ ಅಗತ್ಯ ಎಂದು ಡಿವೈಎಸ್ಪಿ ಜೆ. ಎಸ್ ನ್ಯಾಮೇಗೌಡ ಹೇಳಿದರು.
ಆಕಾಶವಾಣಿಯಲ್ಲಿ ಮಾರ್ಚ್ 29ರಂದು “ಜೊತೆ ಜೊತೆಯಲಿ’’ ನೇರ ಫೋನ ಸಂವಾದದಲ್ಲಿ ‘ಕಲಬುರ್ಗಿ ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಸಿದ್ಧತೆ ಮತ್ತು ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ನಿಗಾ’ ಈ ಕುರಿತಾಗಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಗಮವಾಗಿ ಚುನಾವಣೆ ನಡೆಯಲು ಈಗಾಗಲೇ ಪೊಲೀಸ್ ಇಲಾಖೆ ಕಟ್ಟಡ ವಹಿಸಿದ್ದು ಇದುವರೆಗೆ 13 ಪ್ರಕರಣಗಳಲ್ಲಿ ಎರಡು ಕೋಟಿ 15 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಮತ್ತು 65 ಲಕ್ಷ ರೂಪಾಯಿಯ ಸೀರೆಗಳನ್ನು ವಶಪಡಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 12 ಅಂತರ ರಾಜ್ಯ ತಪಾಸಣಾ ಕೇಂದ್ರ 24 ಅಂತರ ಜಿಲ್ಲ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು ಇದಕ್ಕೆ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳನ್ನು ನಿಯೋಜಿಸಿ ಕಣ್ಗಾವಲು ಇರಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು 50ಸಾವಿರಕ್ಕಿಂತ ಹೆಚ್ಚಿನ ನಗದು ಸಾಗಣೆ ಸಂದರ್ಭದಲ್ಲಿ ಮತ್ತು 10 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ವಸ್ತುಗಳನ್ನು ಸಾಗಿಸುವುದಾದರೆ ಸಂಬಂಧಪಟ್ಟ ಖರೀದಿದಾರರಿಂದ ಪಡೆದ ಚೀಟೀ ಮತ್ತು ಬ್ಯಾಂಕು ವ್ಯವಹಾರದ ದಾಖಲೆಯನ್ನು ಇಟ್ಟುಕೊಳ್ಳುವುದು ಕಡ್ಡಾಯ ಎಂದು ಹೇಳಿದರು. ಮದುವೆ ಸಂದರ್ಭದಲ್ಲಿ ವಸ್ತುಗಳ ಸಾಧನೆಗೆ ಮದುವೆ ಕಾಗದ ಮತ್ತು ತಲುಪಬೇಕಾದ ಸ್ಥಳಗಳ ಮಾಹಿತಿ ಹೊಂದಿರಬೇಕು. ಇಲ್ಲವಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಅವರು ಮನವಿ ಮಾಡಿದರು. ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಯಲ್ಲಿ 2000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕಾರ್ಯನಿರತರಾಗಿದ್ದು 28 ಪೊಲೀಸ್ ಇನ್ಸ್ಪೆಕ್ಟರ್ ,12 ಸಿಪಿಐ 4 ಡಿವೈಎಸ್ಪಿ, ಒಬ್ಬರು ಹೆಚ್ಚುವರಿ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಒಬ್ಬರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕರ್ತವ್ಯ ನಿರತರಾಗಿದ್ದಾರೆ. ಶಾಂತಿಯುತ ಮತದಾನ ನಡೆಸಲು ಈಗಾಗಲೇ 16 ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಒಬ್ಬರನ್ನು ಕಾಯ್ದೆಯಡಿ ಜೈಲಿಗೆ ಕಳುಹಿಸಲಾಗಿದೆ ಎಂದರು. ಜಿಲ್ಲೆಯ ಒಟ್ಟು ಮತಗಟ್ಟೆಗಳಲ್ಲಿ 200ರಷ್ಟು ಮತಗಟ್ಟೆಗಳು ಸಂಕೀರ್ಣವಾಗಿದ್ದು ವ್ಯಾಪಕ ಬಂದೋಬಸ್ತು ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತದೆ. ಪಾರದರ್ಶಕ ಚುನಾವಣೆಯನ್ನು ನಡೆಸಲು ನಾಗರಿಕರು ಮತದಾರರು ಮತ್ತು ರಾಜಕೀಯ ಪಕ್ಷದ ಎಲ್ಲರೂ ಕೂಡ ಕೈಜೋಡಿಸಿ ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು .
ಸುರಪುರದ ರಾಘವೇಂದ್ರ ಭಕ್ರಿ, ಕಲಬುರ್ಗಿಯ ಭೀಮಸೇನ ರಾವ್ ಕುಲಕರ್ಣಿ ತಿಲಕ್ ನಗರ್, ಸಿದ್ದರಾಮ ಕಂಬಾರ್, ಮಾದನಹಿಪ್ಪರಗಾದ ಶಿವಲಿಂಗಪ್ಪ ಭದ್ರೆ ,ನಾಗೇಶ್ ಕೊಳ್ಳಿ ಚಿಂಚೋಳಿ, ಮಧು ಕಲಬುರ್ಗಿ, ವಾಸುದೇವ ಪಾಟೀಲ್ ವೈಜಾಪುರ್ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಲಕ್ಷ್ಮಿಕಾಂತ್ ಪಾಟೀಲ್ ನೆರವಾದರು.ಪೆಭಿ ಶೇಖರ್ ಹಾಗೂ ಅನಿಲ್ ಕುಮಾರ್ ತಾಂತ್ರಿಕ ನೆರವು ನೀಡಿದರು.