ಮುಕ್ತಗಾಳಿಯಲ್ಲಿ ಹಂಪಿ ವೀಕ್ಷಣೆ ಅವಕಾಶ.


ಅನಂತ ಜೋಶಿ
ಹೊಸಪೇಟೆ (ವಿಜಯನಗರ), ಫೆ.14: ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ಬಿಸಿಗಾಳಿ ತುಂಬಿದ ಬಲೂನ್‌ನಲ್ಲಿ (ಹಂಪಿ ಬೈ ಬಲೂನ್‌) ವೀಕ್ಷಿಸುವ ಸೌಲಭ್ಯ ಆರಂಭವಾಗಿದೆ.
ನಿತ್ಯವೂ ಬೆಳಿಗ್ಗೆ 6.30ರಿಂದ 7.30ರವರೆಗೆ ಒಂದು ಬಾರಿಗೆ ಆರು ಮಂದಿ ಸ್ಮಾರಕಗಳನ್ನು ನೋಡಲು ಸಾಧ್ಯವಿದೆ.
ಹಂಪಿ ಉತ್ಸವದ ವೇಳೆ ಹೆಲಿಕಾಪ್ಟರ್‌ನಲ್ಲಿ ಹಂಪಿ ವೀಕ್ಷಣೆಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದನ್ನು ಗಮನಿಸಿ, ಪ್ರವಾಸಿಗರಿಗೆ ಉತ್ತಮ ‘ಪಕ್ಷಿನೋಟ’ದ ಅನುಭವ ನೀಡುವ ಸಲುವಾಗಿ ಇವಾಲ್ವ್‌ ಬ್ಯಾಕ್‌ (ಆರೆಂಜ್‌ ಕೌಂಟಿ) ವತಿಯಿಂದ ಈ ಸೌಲಭ್ಯ ಕಲ್ಪಿಸಲಾಗಿದೆ.
‘ಹಂಪಿಗೆ ಪ್ರವಾಸಿಗರನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಈ ‘ಹಂಪಿ ಬೈ ಬಲೂನ್‌’ ಆರಂಭವಾಗಿದೆ. ಇನ್ನೂ ಮೂರು ದಿನ ನಿರಂತರ ಪ್ರಯಾಣಕ್ಕೆ ಈಗಾಗಲೇ ಪ್ರವಾಸಿಗರು ಸ್ಥಳ ಕಾಯ್ದಿರಿಸಿದ್ದಾರೆ. ಬೇಡಿಕೆ ಇದ್ದರೆ ಅದು ನಿರಂತರ ಮುಂದುವರಿಯಲಿದೆ, ಬೇಡಿಕೆ ಹೆಚ್ಚಿದರೆ ಈಗಿನ ಏಳು ಮಂದಿ ಕುಳಿತುಕೊಳ್ಳಬಹುದಾದ ಬುಟ್ಟಿಯ ಬದಲಿಗೆ 10 ಮಂದಿಯ ಬುಟ್ಟಿ ಅಳವಡಿಸಲು ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ತಿಳಿಸಿದರು.
@12bc = ಎರಡು ಕಡೆ ಆರಂಭ:
ಕಮಲಾಪುರದ ತಾತ್ಕಾಲಿಕ ಹೆಲಿಪ್ಯಾಡ್‌ ಮತ್ತು ವಿಜಯ ವಿಠ್ಠಲ ದೇವಸ್ಥಾನದ ವಾಹನ ನಿಲುಗಡೆ ಸ್ಥಳಗಳನ್ನು ಬಿಸಿಗಾಳಿ ಬಲೂನ್‌ಗಳು ಮೇಲಕ್ಕೆ ಏರುತ್ತಿದ್ದು, ಆಯಾ ದಿನದ ಗಾಳಿಯ ಚಲನೆಯನ್ನು ನೋಡಿಕೊಂಡು ಈ ಎರಡು ಸ್ಥಳಗಳ ಪೈಕಿ ಒಂದು ಸ್ಥಳದಿಂದ ಬಲೂನ್‌ ಮೇಲಕ್ಕೆ ಸಾಗುತ್ತದೆ. ಪೈಲಟ್‌ ಸಹಿತ ಒಟ್ಟು ಏಳು ಮಂದಿ ಪ್ರಯಾಣಕ್ಕೆ ಅವಕಾಶ ಇದ್ದು, ಸದ್ಯ ಒಬ್ಬರಿಗೆ ₹20 ಸಾವಿರ ದರ ನಿಗದಿಪಡಿಸಲಾಗಿದೆ. ಬಹುತೇಕ ಸ್ಮಾರಕಗಳನ್ನು ವೀಕ್ಷಿಸಲು ಅವಕಾಶ ಸಿಗುವ ರೀತಿಯಲ್ಲೇ, ಆರಂಭದ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
‘ಪ್ರವಾಸಿಗರನ್ನು ಹಂಪಿಗೆ ದೊಡ್ಡ ಸಂಖ್ಯೆಯಲ್ಲಿ ಸೆಳೆಯುವುದೇ ಇದರ ಉದ್ದೇಶ. ಬೆಳಿಗ್ಗೆ ಹೊತ್ತಲ್ಲಿ ಮಾತ್ರ ಬಲೂನ್‌ನಲ್ಲಿ ಪ್ರಯಾಣ ಸಾಧ್ಯ. ಬಿಸಿಲೇರಿದರೆ ಮತ್ತು ಗಾಳಿಯ ವೇಗ ಹೆಚ್ಚಿದರೆ ಬಲೂನ್‌ ಅನ್ನು ನಿಗದಿತ ಪ್ರದೇಶದಲ್ಲಿ ಸಾಗಿಸಲು ಕಷ್ಟವಾಗುತ್ತದೆ. ಬಲೂನ್‌ನಲ್ಲಿ ಸುತ್ತಲು ಬಯಸುವ ಮಂದಿ ಒಂದು ದಿನ ಮೊದಲಾಗಿ ಇವಾಲ್ವ್‌ ಬ್ಯಾಕ್‌ ಹೋಟೆಲ್‌ಗೆ ಬಂದು ಸೇರುತ್ತಾರೆ. ಹೊಟೆಲ್‌ ವ್ಯವಹಾರವೂ ಕುದುರುತ್ತದೆ. ಹೀಗೆ ಬಹು ಆಯಾಮಗಳನ್ನು ನೋಡಿಕೊಂಡು ಈ ಸೇವೆ ಆರಂಭವಾಗಿದೆ. ದೇಶದ ನಾಲ್ಕು ಕಡೆ ಸ್ಮಾರಕಗಳ ಮೇಲೆ ಇಂತಹ ಹಾರಾಟ ಸದ್ಯ ನಡೆಯುತ್ತಿದೆ. ಜತೆಗೆ  ಗುಜರಾತ್‌ನ ಕಛ್‌ ಪ್ರದೇಶದಲ್ಲಿ, ರಾಜಸ್ಥಾನದ ಪುಷ್ಕರ್ ಮೇಳದಲ್ಲಿ, ಯುರೋಪಿನ ಹಲವು ದೇಶಗಳಲ್ಲಿ ಇಂತಹ ಬಲೂನ್‌ ಯಾನ ಸಾಮಾನ್ಯ. ಇದೇ ಪ್ರಯೋಗ ಹಂಪಿಯಲ್ಲಿ ಆರಂಭವಾಗಿದೆ. ಹತ್ತು ವರ್ಷದ ಹಿಂದೆ ಇಲ್ಲಿ ಇದೇ ಪ್ರಯೋಗ ನಡೆದಿತ್ತು’ ಎಂದು ಪ್ರಭುಲಿಂಗ ತಳಕೇರಿ ಮಾಹಿತಿ ನೀಡಿದರು.
ವಾರದ ಹಿಂದೆ ನಡೆದ ಪ್ರಾಯೋಗಿಕ ಹಾರಾಟ ನೋಡಿದ ಬಳಿಕ ಮೇ 30ರವರೆಗೆ ಬಲೂನ್‌ ಹಾರಾಟಕ್ಕೆ ಜಿಲ್ಲಾಡಳಿತದಿಂದ ಅನುಮತಿ ನೀಡಿದೆ
ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿಳು ವಿಜಯನಗರ