ಮುಕುಲ್ ರಾಯ್ ಪಕ್ಷ‌ತೊರೆದ‌ ಬೆನ್ನಲ್ಲೇ ಪ್ರಧಾನಿ ಮಹತ್ವದ ಸಭೆ

ನವದೆಹಲಿ, ಜೂ.11- ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಪಶ್ಚಿಮ ಬಂಗಾಳದ ಹಿರಿಯ ಮುಖಂಡ ಮುಕುಲ್ ರಾಯ್ ಅವರು ಬಿಜೆಪಿಗೆ ಗುಡ್ ಬೈ ಹೇಳಿ ಮರಳಿ ತೃಣ ಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಹಿರಿಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು.

ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ‌ ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಮತ್ತು ನಂತರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೊಡೆತಟ್ಟಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಮುಕುಲ್ ರಾಯ್ ಅವರ ನಿರ್ಗಮನ ಭಾರಿ ಹೊಡೆತ ನೀಡಿದೆ.

ಮುಕುಲ್ ರಾಯ್ ಅವರನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎತ್ತಿಕಟ್ಟಲು ಮತ್ತು ಇನ್ನಷ್ಟು ಟಿಎಂಸಿ ನಾಯಕರನ್ನ ಬಿಜೆಪಿಗೆ ಸೆಳೆದುಕೊಳ್ಳುವ ಶಕ್ತರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ,ಮುಕುಲ್ ರಾಯ್ ಈಗ ಪಕ್ಷ ಬಿಟ್ಟು ತೆರಳಿರುವ ಹಿನ್ನೆಲೆಯಲ್ಲಿ ಅವರ ಹಾದಿಯನ್ನು ಇನ್ನಷ್ಟು ಬಿಜೆಪಿ ನಾಯಕರು ಹಿಡಿಯುವ ಸಾಧ್ಯತೆಗಳಿವೆ

ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದಿರುವ ಹಲವು ನಾಯಕರು ಮರಳಿ ಟಿಎಂಸಿ ಪಕ್ಷಕ್ಕೆ ಸೇರಲು ತುದಿಗಾಲಲ್ಲಿ ನಿಂತಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಪಕ್ಷ ಸಂಘಟನೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿದ್ದ ಪ್ರಮುಖ ನಾಯಕರನ್ನು ಬಿಜೆಪಿ ಪಕ್ಷ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು ಇದೀಗ ಅವರು ಮರಳಿ ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿರುವುದು ಬಿಜೆಪಿಗೆ ನಡುಕ ಉಂಟಾಗಿದೆ. ಈ ಎಲ್ಲಾ ಬೆಳವಣಿಗೆಯ ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಗೃಹಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಅಧ್ಯಕ್ಷ ಅವರು ಮಹತ್ವದ ಸಭೆ ನಡೆಸಿದರು

ಯು.ಪಿ ಬಗ್ಗೆ ಚರ್ಚೆ:

ಉತ್ತರಪ್ರದೇಶದಲ್ಲಿ ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವನ್ನು ಸೋಂಕು ನಿರ್ವಹಣೆ ಮಾಡಲು ವಿಫಲವಾಗಿದೆ ಎನ್ನುವ ದೂರುಗಳು ಬಿಜೆಪಿ ಶಾಸಕರಿಂದ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ಗೃಹ ಸಚಿವರು ಮತ್ತು ಬಿಜೆಪಿ ಅಧ್ಯಕ್ಷರು ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎನ್ನುವ ಹಲವು ಬಿಜೆಪಿ ಶಾಸಕರ ಒತ್ತಡ ಹಾಗೂ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮೂವರು ನಾಯಕರು ಸಭೆ ನಡೆಸಿದ್ದಾರೆ