ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅರ್ಜುನ್‌ ತೆಂಡೂಲ್ಕರ್‌ ಆಡುವ ಸಾಧ್ಯತೆ!


ನವದೆಹಲಿ, ಸೆ. 15 -ಕಳೆದ ಬಾರಿಯ ರನ್ನರ್ಸ್‌ಅಪ್‌ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಸೆಪ್ಟೆಂಬರ್‌ 19ರಂದು ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯಲು ನಾಲ್ಕು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಸಂಪೂರ್ಣ ಸಜ್ಜಾಗಿದೆ.

ಕೊರೊನಾ ವೈರಸ್‌ ಭೀತಿ ಹಿನ್ನಲೆಯಲ್ಲಿ ಐಪಿಎಲ್‌ 2020 ಟೂರ್ನಿಯನ್ನು ಈ ಬಾರಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಂಗಣದಲ್ಲಿ ಆಯೋಜಿಸಲಾಗುತ್ತಿದ್ದು, ಸಂಪೂರ್ಣ 60 ಪಂದ್ಯಗಳು ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶಾರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ನಡೆಯಲಿವೆ.

ರೋಹಿತ್‌ ಶರ್ಮಾ ಸಾರಥ್ಯದ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡ ಕಳೆದ ತಿಂಗಳೇ (ಆಗಸ್ಟ್‌) ಯುಎಇ ಅಂಗಣಕ್ಕೆ ಕಾಲಿಟ್ಟಿದ್ದು, ಮೂರು ವಾರಗಳ ಕಠಿಣ ಅಭ್ಯಾಸ ಶಿಬಿರದೊಂದಿಗೆ ಸಮರಾಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಅಂದಹಾಗೆ ಅಭ್ಯಾಸದಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಕೂಡ ಮುಂಬೈ ಇಂಡಿಯನ್ಸ್‌ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವುದು ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಮುಂಬೈ ಇಂಡಿಯನ್ಸ್‌ ತಂಡದ ಆಟಗಾರರ ಜೊತೆಗೆ ಅರ್ಜುನ್‌ ತೆಂಡೂಲ್ಕರ್‌ ಹೋಟೆಲ್‌ನ ಈಜುಕೊಳದಲ್ಲಿ ಸಮಯ ಕಳೆಯುತ್ತಿರುವ ಫೋಟೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಟ್ರೆಂಟ್‌ ಬೌಲ್ಟ್‌, ಜೇಮ್ಸ್‌ ಪ್ಯಾಟಿನ್ಸನ್ ಮತ್ತು ರಾಹುಲ್‌ ಚಹರ್‌ ಅವರಂತಹ ಸ್ಟಾರ್‌ ಆಟಗಾರರ ಜೊತೆಗೆ ಅರ್ಜುನ್‌ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ 20 ವರ್ಷದ ಯುವ ಕ್ರಿಕೆಟಿಗ ಅರ್ಜುನ್‌ ಏನಾದರೂ ಮುಂಬೈ ಇಂಡಿಯನ್ಸ್‌ ತಂಡ ಸೇರಿಕೊಂಡ್ರಾ? ಎಂಬುದು ನೆಟ್ಟಿಗರನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ.

ಸಚಿನ್‌ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ಹಾಗೂ ಈಗಲೂ ಕೂಡ ತಂಡದ ಮುಖ್ಯ ಭಾಗವಾಗಿದ್ದಾರೆ. ಹೀಗಾಗಿ ಭಾರತದಲ್ಲಿ ಐಪಿಎಲ್‌ ಆಯೋಜನೆ ಆದಾಗಲೆಲ್ಲಾ ಅರ್ಜುನ್‌ ತಂಡದಲ್ಲಿ ಕಾಣಿಸಿಕೊಳ್ಳುವುದು ಸಹಜವಾಗಿತ್ತು. ಆದರೆ, ಕೋವಿಡ್‌-19 ಅಂತಹ ಕಠಿಣ ಪರಿಸ್ಥಿತಿಯಲ್ಲೂ ಎಲ್ಲ ರೀತಿಯ ಟೆಸ್ಟ್‌ ಮತ್ತು ಕ್ವಾರಂಟೈನ್‌ಗೆ ಒಳಪಟ್ಟು ಅರ್ಜುನ್‌ ತಂಡದಲ್ಲಿ ಇರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ಅರ್ಜುನ್‌ ಮುಂಬೈ ತಂಡ ಸೇರಿದ್ದಾರೆಯೇ?
ಯುಎಇನಲ್ಲಿ ನಡೆಯಲಿರುವ ಐಪಿಎಲ್‌ 2020 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಎಡಗೈ ವೇಗದ ಬೌಲರ್‌ ಅರ್ಜುನ್‌ ತೆಂಡೂಲ್ಕರ್‌ ಪಂದ್ಯಗಳನ್ನು ಆಡುವುದಿಲ್ಲ. ಆದರೆ ಮುಂಬೈ ತಂಡಕ್ಕೆ ನೆಟ್‌ ಬೌಲರ್‌ ಆಗಿ ಸೇರಿಕೊಂಡಿದ್ದಾರೆ. ತಂಡದ ಅಭ್ಯಾಸದಲ್ಲಿ ಬ್ಯಾಟ್ಸ್‌ಮನ್‌ಗಳ ತಾಲೀಮಿಗೆ ನೆರವಾಗಲು ನೆಟ್‌ ಬೌಲರ್‌ ಆಗಿ ಅರ್ಜುನ್‌ ಕೆಲಸ ಮಾಡಲಿದ್ದಾರೆ. ಐಪಿಎಲ್‌ನ ಎಲ್ಲಾ ಫ್ರಾಂಚೈಸಿ ತಂಡಗಳಿಗೂ ಹೆಚ್ಚುವರಿ ನೆಟ್‌ ಬೌಲರ್‌ಗಳನ್ನು ಹೊಂದಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ.

ಮುಂಬೈ ಇಂಡಿಯನ್ಸ್‌ ಪರ ಅರ್ಜುನ್‌ ಆಡಬಹುದೆ?
ನೆಟ್‌ ಬೌಲರ್‌ ಆಗಿ ಮುಂಬೈ ಇಂಡಿಯನ್ಸ್‌ ತಂಡದ ಜೊತೆಗೆ ಯುಎಇಗೆ ಪ್ರಯಾಣ ಬೆಳೆಸಿರುವ ಅರ್ಜುನ್‌ ತೆಂಡೂಲ್ಕರ್‌ಗೆ ಐಪಿಎಲ್‌ 2020 ಟೂರ್ನಿಯಲ್ಲಿ ಆಡುವ ಅವಕಾಶವೂ ಇದೆ. ಅದು ಹೇಗೆ ಎಂದರೆ, ಯಾರಾದರೂ ಒಬ್ಬ ಆಟಗಾರ ಗಾಯಗೊಂಡು ಟೂರ್ನಿಯಿಂದಲೇ ಹೊರ ನಡೆದರೆ ಬದಲಿ ಆಟಗಾರರ ಸೇರ್ಪಡೆ ಸಲುವಾಗಿ ತಂಡದ ಜೊತೆಗೆ ಇರುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಬೌಲರ್‌ ಒಬ್ಬನ ಅಗತ್ಯವಿದ್ದರೆ ನೆಟ್‌ ಬೌಲರ್‌ಗಳಲ್ಲಿ ಒಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಅಂದಹಾಗೆ ಅರ್ಜುನ್‌ ತೆಂಡೂಲ್ಕರ್‌ ಆಲ್‌ರೌಂಡರ್‌ ಆಗಿದ್ದು ಎಡಗೈ ವೇಗದ ಬೌಲಿಂಗ್‌ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೂಡ ಮಾಡಬಲ್ಲರು. ಅರ್ಜುನ್‌ 2018ರಲ್ಲಿ ಭಾರತದ 19 ವರ್ಷದೊಳಗಿನವರ ತಂಡದಲ್ಲೂ ಆಡಿದ ಅನುಭವ ಹೊಂದಿದ್ದಾರೆ.