ಮುಂಬೈನಲ್ಲಿ 1.6 ಕೋಟಿ ರೂ. ಗಾಂಜಾ ವಶ

ಮುಂಬೈ, ನ. ೮- ಮಹಾರಾಷ್ಟ್ರದ ಬಾಂದ್ರಾ ಪ್ರದೇಶದಲ್ಲಿ ೧.೬ ಕೋಟಿ ರೂ. ಮೌಲ್ಯದ ಗಾಂಜಾ (ಕ್ಯಾನಾಬಿಸ್) ವನ್ನು ಮುಂಬೈ ಪೊಲೀಸರು ಜಪ್ತಿ ಮಾಡಿ, ಪ್ರಕರಣ ಸಂಬಂಧ ಪ್ರಮುಖ ರೂವಾರಿ ಸಾಫ್ಟ್‌ವೇರ್ ಇಂಜಿನಿಯರ್ ನನ್ನು ಬಂಧಿಸಿದ್ದಾರೆ.

ಮುಂಬೈ ಪೊಲೀಸರ ಮಾದಕ ವಸ್ತು ವಿರೋಧಿ ಘಟಕ ಈ ದಂಧೆಯನ್ನು ಪತ್ತೆಹಚ್ಚಿದ್ದು, ಬಾಂದ್ರಾ ಮೂಲದ ೨೫ ವರ್ಷದ ಯಶ್ ಜಿ ಕಲಾನಿ ಸಾಫ್ಟ್‌ವೇರ್ ಇಂಜಿನಿಯರ್ ಬಂಧಿತ ಆರೋಪಿಯಾಗಿದ್ದಾನೆ.

ಬಾಂದ್ರಾದ ನ್ಯಾಷನಲ್ ಲೈಬ್ರರಿ ರಸ್ತೆ ಬಳಿ ಇನ್ಸ್‌ಪೆಕ್ಟರ್ ಅನಿಲ್ ವಾಧವಾನೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ೧ ಕೆಜಿ ಗಾಂಜಾ ಜಪ್ತಿ ಮಾಡಿ, ಆಟೋರಿಕ್ಷಾ ಚಾಲಕ ಗುರು ಜೈಸ್ವಾಲ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು.

ತದನಂತರ, ಈತ ನೀಡಿದ ಮಾಹಿತಿ ಆಧಾರದ ಮೇಲೆ ಯಶ್ ಜಿ ಕಲಾನಿ ವಶಕ್ಕೆ ತೆಗೆದುಕೊಂಡು, ೧.೬೨ ಕೋಟಿ ಮೌಲ್ಯದ ಒಟ್ಟು ೯ ಕೆಜಿ ಮಾದಕ ವಸ್ತು ಪತ್ತೆಯಾಯಿತು ಎಂದು ಉಪ ಪೊಲೀಸ್ ಆಯುಕ್ತ (ಎಎನ್‌ಸಿ) ದತ್ತಾ ನಲಾವಾಡೆ ಹೇಳಿದ್ದಾರೆ.

ಆರೋಪಿ ಕಲಾನಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಸಾಫ್ಟ್‌ವೇರ್ ಸಿಸ್ಟಮ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾನೆ.ಇನ್ನೂ ಈತ ವಿದೇಶ ದಿಂದ ಮಾದಕ ವಸ್ತು ಆಮದು ಮಾಡಿಕೊಂಡಿರುವ ಮಾಹಿತಿ ಇದ್ದು, ತನಿಖೆ ಮುಂದುವರೆಸಲಾಗಿದೆ.