ಮುಂಬೈನಲ್ಲಿ ಸೆರೆ ಸಿಕ್ಕ ರೌಡಿ ಶೀಟರ್ ಬಚ್ಚಾ ವಿರುದ್ದ ದಾಖಲಾಗಿವೆ 53 ಕೇಸ್!

ಶಿವಮೊಗ್ಗ, ನ. 23: ಉದ್ಯಮಿಯೋರ್ವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್, ಶಿವಮೊಗ್ಗ ಟಿಪ್ಪುನಗರ ನಿವಾಸಿ ಬಚ್ಚಾ
ಯಾನೆ ಬಚ್ಚನ್ (29) ಮುಂಬೈನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕೆ, ಜಿಲ್ಲಾ ಪೊಲೀಸ್ ಇಲಾಖೆ ಎರಡು ವಿಶೇಷ
ಪೊಲೀಸ್ ತಂಡ ರಚನೆ ಮಾಡಿತ್ತು. ನ. 22 ರಂದು ಆರೋಪಿಯನ್ನು ಮುಂಬೈನಲ್ಲಿ ಬಂಧಿಸುವಲ್ಲಿ ಪೊಲೀಸ್ ತಂಡಗಳು ಯಶಸ್ವಿಯಾಗಿವೆ.
ಉಳಿದಂತೆ ಆತನ ಸಹಚರರಾದ ಬಸವನಗುಡಿ ನಿವಾಸಿ ಮಹಮ್ಮದ್ ತೌಹೀದ್ (19), ಮಹಮದ್ ಬಿಲಾಲ್ (21) ಎಂಬುವರನ್ನು ಶಿವಮೊಗ್ಗದಲ್ಲಿಯೇ ನ. 16 ರಂದು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಸಾಲುಸಾಲು ಕೇಸ್!: ಆರೋಪಿ ಬಚ್ಚಾ ವಿರುದ್ದ ಶಿವಮೊಗ್ಗ ನಗರದ ವಿವಿಧ ಪೊಲೀಸ್ಠಾ ಣೆಗಳಲ್ಲಿ, 53 ಪ್ರಕರಣ ದಾಖಲಾಗಿದೆ. ತುಂಗಾನಗರ ಠಾಣೆಯೊಂದರಲ್ಲಿಯೇ ಈತನ ವಿರುದ್ದ 50 ಕೇಸ್ ಗಳಿವೆ! ಆರೋಪಿಯು ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕೊಲೆ ಬೆದರಿಕೆ, ಮಾರಣಾಂತಿಕ ಹಲ್ಲೆ, ವಂಚನೆ, ಶಸ್ತ್ರಾಸ್ತ್ರಕಾಯ್ದೆ, ದರೋಡೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಪೊಲೀಸ್ ಇಲಾಖೆ ತಿಳಿಸಿದೆ.