ಮುಂಬೈನಲ್ಲಿ ಡ್ರೋಣ್ ನಿಷೇಧ

ಮುಂಬೈ.ಅ೨೭- ಭಯೋತ್ಪಾದನಾ ದಾಳಿ ಕುರಿತಂತೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಡ್ರೋಣ್‌ಗಳನ್ನು ಬಳಸದಂತೆ ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಮುಂಬೈ ಮೇಲೆ ಭಯೋತ್ಪಾದಕರ ದಾಳಿಯ ಸಂಭಾವ್ಯತೆ ಕುರಿತು ಮಾಹಿತಿ ಕಲೆ ಹಾಕಿರುವ ಗುಪ್ತಚರ ಇಲಾಖೆ ಈ ಕುರಿತು ಪೊಲೀಸರಿಗೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಿರುವ ಮುಂಬೈ ಪೊಲೀಸರು ನಗರದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.
ಮುಂಬೈ ಪೊಲೀಸರ ಆದೇಶ ಪ್ರತಿಸಾಲು ಸಾಲು ಹಬ್ಬಗಳಿರುವ ಕಾರಣ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಅದರಲ್ಲೂ ಜನನಿಬಿಡ ಪ್ರದೇಶಗಳಲ್ಲಿ ಡ್ರೋಣ್ ಅಥವಾ ಕ್ಷಿಪಣಿ ದಾಳಿ ನಡೆಯಬಹುದೆಂದು ಎಚ್ಚರಿಕೆ ನೀಡಿತ್ತು.ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಮುಂಬೈ ಪೊಲೀಸರು, ರಿಮೋಟ್‌ಗಳಿಂದ ನಿಯಂತ್ರಣ ಮಾಡಬಹುದಾದ ಡ್ರೋಣ್‌ಗಳು, ಮೈಕ್ರೋಲೈಟ್ ವಿಮಾನಗಳು ಹಾಗೂ ಇತರ ಸಾಧನಗಳನ್ನು ನಗರದಲ್ಲಿ ಬಳಸಬಾರದೆಂದು ಪೊಲೀಸರು ತಿಳಿಸಿದ್ದಾರೆ.
ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದ್ದು, ಈ ಆದೇಶ ಅಕ್ಟೋಬರ್ ೩೦ರಿಂದ ಜಾರಿಗೆ ಬರಲಿದ್ದು, ನವೆಂಬರ್ ೨೮ರವರೆಗೆ ಜಾರಿಯಲ್ಲಿರಲಿದೆ.