
ಮುಂಬೈ, ಮೇ.9- ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಮಿಂಚಿದ ಕೊಲ್ಕತ್ತ ಇಂದು ಮುಂಬೈ ವಿರುದ್ಧ 52 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಬುಮ್ರಾ ಮಾರಕ ಬೌಲಿಂಗ್ ಹಾಗೂ ಇಶಾನ್ ಕಿಶನ್ ಅರ್ಧಶತಕದ ಹೊರತಾಗಿಯೂ ಮುಂಬೈ ಸೋಲಿಗೆ ಶರಣಾಯಿತು.

ಈ ಗೆಲುವಿನೊಂದಿಗೆ ಕೆಕೆಆರ್ 12 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋಲು ಕಂಡು ಐದರಲ್ಲಿ ಗೆಲುವು ಸಾಧಿಸಿ 10 ಅಂಕಗಳಿಸಿದೆ. ಮತ್ತೊಂದೆಡೆ ಮುಂಬೈ , ಐಪಿಎಲ್ ನಲ್ಲಿ 9 ನೇ ಸೋಲು ಅನುಭವಿಸಿದೆ.
166 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಹತ್ತಿದ ಮುಂಬೈ 17.3 ಓವರ್ಗಳಲ್ಲಿ 113 ರನ್ ಗಳಿಗೆ ಸರ್ವಪತನ ಕಂಡಿತು.
ಮೂರು ರನೌಟ್ ಹಾಗೂ ಪ್ಯಾಟ್ ಕಮಿನ್ಸ್ 15 ನೇ ಓವರ್ ನಲ್ಲಿ ಮೂರು ವಿಕೆಟ್ ಉರುಳಿಸಿ ಮುಂಬೈ ಪತನಕ್ಕೆ ನಾಂದಿಯಾಯಿತು.
ಇಶಾನ್ ಕಿಶನ್ 51 ರನ್ ಗಳಿಸಿ ನಡೆಸಿದ ಏಕಾಂಗಿ ಹೋರಾಟ ವ್ಯರ್ಥವಾಯಿತು. ನಾಯಕ ರೋಹಿತ್ ಶರ್ಮಾ ಸೇರಿದಂತೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ರನ್ ಗಳಿಸಲು ಹೆಣಗಾಡಿದರು.
ಪೊಲಾರ್ಡ್ 15, ಟಿಮ್ ಡೇವಿಡ್ 13 ರಮಣ್ ದೀಪ್ ಸಿಂಗ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು.
ಈ ಬಾರಿಯ ಟೂರ್ನಿಯಲ್ಲಿ ಮುಂಬೈ ತೀರಾ ಕಳಪೆ ಪ್ರದರ್ಶನದಿಂದ ಪ್ಲೇ ಹಂತದಿಂದ ಹೊರಬಿದ್ದಿದೆ.
ಮಾರಕ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ ಕೊಲ್ಕತ್ತ ನೈಟ್ ರೈಡರ್ಸ್ ತಂಡವನ್ನು 165 ರನ್ ಗಳಿಗೆ ನಿಯಂತ್ರಿಸುವಲ್ಲಿ ಮುಂಬೈ ಸಫಲವಾಯಿತು.
ಕೆಕೆ ಅರ್ ಪರ ನಿತೀಶ್ ರಾಣಾ ಹಾಗೂ ವೆಂಕಟೇಶ್ ಅಯ್ಯರ್ ತಲಾ 43 ರನ್ ಗಳಿಸಿದ್ದರಿಂದ 20 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲು ಸಾಧ್ಯವಾಯಿತು.
ಇಂದಿನ ಪಂದ್ಯದಲ್ಲಿ ಕೆಕೆಆರ್ ಪಾಳಯದಲ್ಲಿ ಐದು ಬದಲಾವಣೆಗಳನ್ನು ಮಾಡಿಕೊಂಡುತು. ಅಜಿಂಕ್ಯಾ ರೆಹಾನೆ ಮತ್ತು ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಆರಂಭಿಸಿ 5.4 ಓವರ್ ಗಳಲ್ಲಿ 60 ರನ್ ಸೇರಿಸಿದರು.
ರಹಾನೆ 25 ರನ್ ಗಳಿಸಿದರು. ಬಳಿಕ ಆಡಲಿಳಿದ ರಾಣಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 43 ರನ್ ಗಳಿಸಿ ಆಡುತ್ತಿದ್ದ ವೆಂಕಟೇಶ್ ಔಟಾದರು. ಶ್ರೇಯಸ್ ಅಯ್ಯರ್ 6 ಹಾಗೂ ಆಂಡ್ರಿ ರಸೆಲ್ 9 ರನ್ ಗಳಿಸಿ ನಿರ್ಗಮಿಸಿದ್ದು ತೀವ್ರ ಹಿನ್ನಡೆಗೆ ಕಾರಣವಾಯಿತು.
ಶೆಲ್ಡನ್ ಜಾಕ್ಸನ್ 5 ಪ್ಯಾಟ್ ಕಮಿನ್ಸ್ ಹಾಗೂ ಸುನಿಲ್ ನಾರಾಯಣ್ ಶೂನ್ಯಕ್ಕೆ ನಿರ್ಗಮಿಸಿದರು. ಕೊನೆಯ ಹಂತದಲ್ಲಿ ರಿಂಕು ಸಿಂಗ್ 23 ರನ್ ಗಳಿಸಿಸರು.
ಮುಂಬೈ ಇಂಡಿಯನ್ಸ್ ಪರ ಬೂಮ್ರಾ ಕೇವಲ 10 ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ಐಪಿಎಲ್ ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿದ ಕೀರ್ತಿಗೆ ಭಾಜನರಾದರು.