ಮುಂಬಯಿ ಬಾರ್ಜಿನಲ್ಲಿ ಚಂಡಮಾರುತಕ್ಕೆ ಸಿಲುಕಿ ಅಲೆಗಳ ಅಬ್ಬರಕ್ಕೆ ಹರಸಾಹಸ ಪಟ್ಟವರ ಮನದಾಳದ ಮಾತು

ಬಂಟ್ವಾಳ, ಜೂ.೩-  ನಮ್ಮ ಕೆಲಸ ಅಂತಿಮ ಹಂತದಲ್ಲಿದ್ದು, ಇನ್ನೇನು ಒಂದು ವಾರದಲ್ಲಿ ಊರಿಗೆ ಮರಳುತ್ತೇವೆ ಎಂಬ ಸಂತಸದಲ್ಲಿದ್ದೆವು. ಆದರೆ ಆದಾಗಲೇ ನಡೆಯಬಾರದ ಘಟನೆಯೊಂದು ನಡೆದು ನಾವು ಬದುಕುವ ಸಾಧ್ಯತೆಯನ್ನೇ ಕಳೆದುಕೊಂಡು ಬಿಟ್ಟಿದ್ದು, ಆದರೆ ದೇವರ ದಯೆ ಎಂಬಂತೆ ಬದುಕಿ ಬಂದಿದ್ದೇವೆ. ಆದರೆ ನಮ್ಮ ಜತೆ ಕೆಲಸ ಮಾಡುತ್ತಿದ್ದ ಒಂದಷ್ಟು ಮಂದಿ ಕಣ್ಮೆರೆಯಾಗಿರುವ ನೋವು ಕಾಡುತ್ತಲೇ ಇದೆ…

ಮುಂಬಯಿಯಲ್ಲಿ ಬಾರ್ಜ್ನಲ್ಲಿ  ಇಂಧನ ಸಂಸ್ಥೆ  ಒಎನ್‌ಜಿಸಿಯ ರಿಗ್ ಮರುಜೋಡಣೆ(ರಿಲಾಂಚಿಂಗ್) ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಚಂಡಮಾರುತದ ಪರಿಣಾಮ ಮುಳುಗಡೆಯಾಗಿ ೧೦-೧೨ ಗಂಟೆಗಳ ಕಾಲ ಸಮುದ್ರ ನೀರಿನಲ್ಲಿ ಈಜಿ ಬದುಕಿ ಬಂದ ದ.ಕ.ಜಿಲ್ಲೆಯ ಇಬ್ಬರು ಯುವಕರು ತಮ್ಮ ಅನುಭವಗಳನ್ನು ವಿವರಿಸಿದ್ದಾರೆ.

ಬಾರ್ಜ್ನಲ್ಲಿ ಸುಮಾರು ೨೬೦ ಮಂದಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಕರ್ನಾಟಕದ ತೊಕ್ಕೊಟ್ಟು ಕಲ್ಲಾಪಿನ ಚ್ಯವನ್‌ರಾಜ್ ಜೆ.ವಿ. ಹಾಗೂ ಬಂಟ್ವಾಳ ಪಾಣೆಮಂಗಳೂರಿನ ಸುಕುಮಾರ್ ಅವರು ಕೂಡ ಕಾರ್ಯನಿರ್ವಹಿಸುತ್ತಿದ್ದರು. ಮೆಕ್ಯಾನಿಕಲ್ ಎಂಜಿನಿಯರ್‌ಗಳಾದ ಅವರು ಸುಮಾರು ಎರಡೂವರೆ ವರ್ಷಗಳಿಂದ ತಮ್ಮ ಕಂಪೆನಿಯ ಮೂಲಕ ಬಾರ್ಜ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಸಂಜೆಯಿಂದ ಮುಂಜಾನೆವರೆಗೆ ಹೋರಾಟ

ಮೇ ೧೭ರಂದು ಸಂಜೆ ಸುಮಾರು ೪-೫ ಗಂಟೆಯ ಸುಮಾರಿಗೆ ಇವರ ಬಾರ್ಜ್ ಸಿಂಕ್ ಆಗಿ ಮುಳುಗಲು ಆರಂಭಿಸಿದ್ದು, ಆದಾಗಲೇ ಇವರು ಜೀವರಕ್ಷಣೆಗಾಗಿ ಸಮುದ್ರಕ್ಕೆ ಹಾರಿದ್ದಾರೆ. ಲೈಫ್‌ಜ್ಯಾಕೇಟ್ ಇದ್ದರೂ, ನೀರಿನ ಭೀಕರ ಅಲೆಗಳ ಅಬ್ಬರಕ್ಕೆ ಸಾಕಷ್ಟು ಬಾರಿ ಮುಳುಗಿ ಬಂದಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಏನೂ ಕಾಣದೆ, ಸಂಪೂರ್ಣ ಕತ್ತಲ ನಡುವೆ ನೀರ ರಾಶಿಯಲ್ಲಿ ಬದುಕುವ ಆಸೆಗಳನ್ನೇ ಮರೆತು ಹರಸಾಹಸ ಪಟ್ಟಿದ್ದಾರೆ. ಎತ್ತ ಸಾಗುತ್ತಿದ್ದೇವೆ ಎಂಬ ಆರಿವೇ ಇಲ್ಲದೆ ನೀರಿನಲ್ಲಿ ಈಜಾಡಿದ್ದಾರೆ.

ಹೀಗಾಗಿ ರಾತ್ರಿಯಿಡೀ ಹೋರಾಟದ ಬಳಿಕ ಮೇ ೧೮ರ ಮುಂಜಾನೆ ೩-೪ ಗಂಟೆಯ ಹೊತ್ತಿಗೆ ಇಂಡಿಯನ್ ನೇವಿಯವರು ಇವರನ್ನು ರಕ್ಷಣೆ ಮಾಡಿದ್ದು, ಅದಾಗಲೇ ದೇಹದ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿದ್ದರು. ನೇವಿ ಶಿಫ್ ಏರುವುದಕ್ಕೂ ಸಾಧ್ಯವಾಗದೆ ರೋಪಿನ ಮೂಲಕ ಇವರನ್ನು ಮೇಲಕ್ಕೆತ್ತಿದ್ದರು. ರಕ್ಷಣೆಯ ಬಳಿಕ ಮಾತನಾಡುವ ಸ್ಥಿತಿಯಲ್ಲೂ ನಾವಿರಲಿಲ್ಲ ಎಂದು ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾರೆ.

ಉಪ್ಪು ನೀರಿನ ಪರಿಣಾಮ ರಕ್ಷಣೆಯ ಬಳಿಕ ಸುಮಾರು ೪ ಗಂಟೆಗಳ ಕಾಲ ಇವರು ಕಣ್ಣುಗಳು ಕೂಡ ಮಂಜಾಗಿ ಏನೂ ಕಾಣುತ್ತಿರಲಿಲ್ಲ. ಬಳಿಕ ಕಣ್ಣಿನ ಔಷಧಿಯನ್ನು ಹಾಕಿ ಆರೈಕೆ ಮಾಡಿದ ಬಳಿಕ ನಿಧಾನಕ್ಕೆ ಕಾಣುವುದಕ್ಕೆ ಆರಂಭಗೊಂಡಿತ್ತು. ಸುಮಾರು ೩ ದಿನಗಳವರೆಗೆ ಆಯಾಸ ಇದ್ದು, ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಯುವಕರಿಬ್ಬರು ಸಾವನ್ನು ಗೆದ್ದು ಬಂದು ನಿಟ್ಟುಸಿರು ಬಿಡುತ್ತಾರೆ.

ಅಂತಿಮ ಹಂತದ ಕೆಲಸ

ಸಾಮಾನ್ಯವಾಗಿ ಬಾರ್ಜ್‌ಗಳಲ್ಲಿ ಒಂದು ಫ್ಲಾಟ್‌ಫಾರಂ ಕೆಲಸಕ್ಕೆ ಮೂರು ತಿಂಗಳ (ಅಂದಾಜು ನೂರು ದಿನಗಳ) ಟಾರ್ಗೆಟ್ ಇರುತ್ತದೆ. ಪ್ರಸ್ತುತ ಈ ಬಾರ್ಜ್ನಲ್ಲಿದ್ದ ಸಿಬಂದಿ ಒಂದು ಫ್ಲಾಟ್‌ಫಾರ್ಮ್ ಮುಗಿಸಿ ೨ನೇ ಫ್ಲಾಟ್‌ಫಾರ್ಮ್ ಕೆಲಸ ಮಾಡುತ್ತಿದ್ದು, ಅಂತಿಮ ಹಂತದ ಕೆಲಸ ನಡೆಯುತ್ತಿತ್ತು.

ಕೋವಿಡ್ ಕಾರಣಕ್ಕೆ ರೊಟೇಶನ್ ವ್ಯವಸ್ಥೆ ಇಲ್ಲದೆ, ನಾವೇ ಕೆಲಸ ಮುಂದುವರಿಸಿದ್ದೆವು. ಸುಮಾರು ಒಂದು ವಾರದ ಕೆಲಸ ಬಾಕಿಯಿದ್ದು, ಬಳಿಕ ಊರಿಗೆ ತೆರಳುವ ಸಿದ್ಧತೆಯಲ್ಲಿದ್ದೆವು. ೨೬೦ ಮಂದಿಯಲ್ಲಿ ಸಾಕಷ್ಟು ಮಂದಿಯ ರಕ್ಷಣೆಯಾಗಿದ್ದು, ಒಂದಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಒಂದಷ್ಟು ಮಂದಿ ಇನ್ನೂ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಜತೆಯಾಗಿ ಕೆಲಸ ಮಾಡಿದ ಅವರನ್ನು ಕಳೆದುಕೊಂಡಿರುವ ನೋವು ಕಾಡುತ್ತಿದೆ ಎನ್ನುತ್ತಾರೆ. ಈ ಇಬ್ಬರು ಯುವಕರ ಸಾಹಸಕ್ಕೆ ದ.ಕ.ಸಂಸದ ನಳಿನ್‌ಕುಮಾರ್ ಅವರ ಶಿಫಾರಸ್ಸಿನ ಮೇರೆಗೆ ಒಎನ್‌ಜಿಸಿ ೧ ಲಕ್ಷ ರೂ.ಗಳನ್ನು ನೀಡಿದೆ.

ಘಟನೆ ನಡೆದಾಗಲೇ ಕಂಪೆನಿಯವರು ಮನೆಗೆ ತಿಳಿಸಿದ ಕಾರಣ ಸಂಪೂರ್ಣ ಹೆದರಿದ್ದರು. ರಕ್ಷಣೆಯಾದ ತತ್‌ಕ್ಷಣ ನೇವಿಯವರ ಮೊಬೈಲ್ ಮೂಲಕ ಮನೆಗೆ ಕರೆ ಮಾಡಿ ರಕ್ಷಣೆಯ ಕುರಿತು ತಿಳಿಸಿದ್ದೆ. ಈಗ ಮನೆಯವರು ಆ ಕೆಲಸಕ್ಕೆ ಹೋಗುವುದೇ ಬೇಡ ಎನ್ನುತ್ತಿದ್ದಾರೆ. ಊರಿನಲ್ಲೇ ಕೆಲಸ ಮಾಡುವಂತೆ ಹೇಳುತ್ತಿದ್ದಾರೆ.

 ಚ್ಯವನ್‌ರಾಜ್ ಜೆ.ವಿ.

ಘಟನೆ ನಡೆದು ಬದುಕುತ್ತೇವೆಯೋ, ಸಾಯುತ್ತೆವೆಯೋ ಎಂಬ ಆಲೋಚನೆಯೇ ಇರಲಿಲ್ಲ. ನಮ್ಮ ಹಣೆಬರಹದಲ್ಲಿ ಬರೆದಿತ್ತು ಹಾಗಾಗಿ ಬದುಕಿದ್ದೇವೆ. ತರಬೇತಿಯಲ್ಲಿ ಹೇಳಿದಂತೆ ಒಟ್ಟಿಗೆ ಇದ್ದಾಗ ರಕ್ಷಣೆಗೂ ಮೊದಲ ಆದ್ಯತೆ ನೀಡುತ್ತಾರೆ ಎನ್ನುವ ಕಾರಣಕ್ಕೆ ೫ ಮಂದಿ ಒಟ್ಟಿಗೆ ಇದ್ದೆವು. ಮನೆಯಲ್ಲಿ ಪ್ರಾರಂಭದಲ್ಲಿ ಏನಾಗಿತ್ತು ಎಂಬುದು ಗೊತ್ತಿರಲಿಲ್ಲ, ಸೈಕ್ಲೋನ್‌ನಿಂದ ತೊಂದರೆಯಲ್ಲಿದ್ದೇವೆ ಎಂದಷ್ಟೇ ಗೊತ್ತಿತ್ತು. ಬಳಿಕ ಮನೆಯಲ್ಲಿ ನಾನೇ ವಿವರಿಸಿ ಹೇಳಿದ್ದೇವೆ.

ಸುಕುಮಾರ್ ಪಾಣೆಮಂಗಳೂರು