ಮುಂದೆಯೂ ಶಿಕ್ಷಕರ ಪರವಾಗಿ ದುಡಿವೆ: ಮರಿತಿಬ್ಬೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು:ಜೂ.09:- ಶಿಕ್ಷಕರ ಸಮುದಾಯದ ಪರವಾಗಿ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಕೆಲಸ ಮಾಡುತ್ತೇನೆ. ಇದೇ ವೇಳೆ ಈ ಸೋಲಿಗೆ ಧೃತಿಗೆಡುವುದಿಲ್ಲ. ತಮ್ಮ ಸೋಲು ಶಿಕ್ಷಕರ ಸೋಲು. ಕಳಂಕಿತ ಮತದಾರರು ಎಂಬ ವರದಿಗಳು ಬರುತ್ತಿರುವುದನ್ನು ಕೇಳಿ ಬೇಸರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾದ ಮರಿತಿಬ್ಬೇಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪರಿಷತ್‍ಗೆ ನಡೆದ ಚುನಾವಣೆ ವೇಳೆ ಶಿಕ್ಷಕರು ಆಮಿಷಕ್ಕೆ ಒಳಗಾದರೇ ಎಂಬುದನ್ನು ಸಮಾಜ ಹಾಗೂ ಮಾಧ್ಯಮ ನಿರ್ಧರಿಸುತ್ತವೆ. ಆದರೆ ಅಭ್ಯರ್ಥಿಯಾಗಿ ತಾವು ಈ ಬಗ್ಗೆ ಮಾತನಾಡುವುದಿಲ್ಲ. ಚುನಾವಣೆ ವೇಳೆ ಹಣ ಹಂಚಿಕೆ ನಡೆದಿದೆ ಎಂಬಿವೇ ಮೊದಲಾದ ಆರೋಪ ಕುರಿತಂತೆ ಕ್ರಮ ಕೈಗೊಳ್ಳುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಷಯ. ತಾವು ಈ ಬಗ್ಗೆ ಮಾತನಾಡಿದರೆ ಸೋಲುಂಡ ಕಾರಣದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎನ್ನುತ್ತಾರೆ. ಆದ್ದರಿಂದ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.
ದಕ್ಷಿಣ ಶಿಕ್ಷಣ ಕ್ಷೇತ್ರದ ಚುನಾವಣೆಗೆ ಆಯ್ಕೆ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ನಗರಾಧ್ಯಕ್ಷರು ಮತ್ತು ಶಾಸಕರು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದರೂ ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನ ಹೊಣೆ ಹೋರುತ್ತೇನೆ. ಪಕ್ಷಕ್ಕೆ ನನ್ನ ಮೇಲೆ ಭರವಸೆ ಇತ್ತು. ನಾಲ್ಕು ಬಾರಿ ಗೆಲ್ಲಿಸಿದ ಶಿಕ್ಷಕರು 24 ವರ್ಷ ಶಿಕ್ಷಕರ ಸಮುದಾಯದ ಪರ ಮಾಡಿದ ಹೋರಾಟಕ್ಕೆ ಸಿಗದ ಫಲಿತಾಂಶವನ್ನು ಈ ಬಾರಿ ಆಡಳಿತ ಪಕ್ಷದಿಂದ ಎಲ್ಲಾ ಕೆಲಸಗಳನ್ನು ಈಡೇರಿಸುವ ಆಸೆ ಇತ್ತು. ಸೋಲಬೇಕಾಯಿತು. ಹೀಗಿದ್ದರೂ ನಾಲ್ಕು ಜಿಲ್ಲೆಯಲ್ಲಿ ಪಕ್ಷ ಕಾರ್ಯಕರ್ತರು, ಮುಖಂಡರು ಅಧ್ಯಕ್ಷ ನನ್ನ ಪರ ಪ್ರಚಾರ ಮಾಡಿದರು ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಶಿಕ್ಷಕರಿಗೆ ಒಳ್ಳೆಯ ಅವಕಾಶವಿತ್ತು. ಈ ಭಾಗದ ಮುಖ್ಯಮಂತ್ರಿ ಇದ್ದಾಗ ಶಿಕ್ಷಕರು ಈ ಬಾರಿ ಆಶಿರ್ವಾದ ಮಾಡಿಲ್ಲ ಎಂಬ ಬೇಸರ ವಿಲ್ಲ. ಆದರೆ,
ದಕ್ಷಿಣ ಶಿಕ್ಷಕರ ಕ್ಷೇತ್ರದ ಶ್ರೇಷ್ಠತೆ ಕಾಯ್ದುಕೊಂಡಿತ್ತು. ಸಾಮಾನ್ಯ ಕಾರ್ಯಕರ್ತನಂತೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ. ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶ್ರಮಿಸುತ್ತೇನೆ. ನಾಲ್ಕೂ ಜಿಲ್ಲೆಯಲ್ಲಿ ಶಿಕ್ಷಕರು ನನ್ನೊಡನೆ ಇದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ನಗರಾಧ್ಯಕ್ಷ ಆರ್. ಮೂರ್ತಿ, ಕೆ.ವಿ. ಮಲ್ಲೇಶ್, ಉತ್ತನಹಳ್ಳಿ ಶಿವಣ್ಣ ಇದ್ದರು.