
ಅನಂತ ಜೋಶಿ
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ಏ.25: ಬಹುದಶಕಗಳ ಕೂಗು ನೂತನ ವಿಜಯನಗರ ಜಿಲ್ಲೆ ಸ್ಥಾಪನೆಗೆ ಕಾರಣರಾದ ಸಚಿವ ಆನಂದ್‍ಸಿಂಗ್ ವಿಜಯನಗರ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ವಿಜಯ ಪತಾಕೆ ಹಾರಿಸಿದ್ದು ಪಕ್ಷಬಿಟ್ಟು ಪಕ್ಷ ಹಿಡಿದರೂ ಕೈಹಿಡಿದ ಮತದಾರ ಈ ಬಾರಿ ವ್ಯಕ್ತಿ ಬದಲಾವಣೆ ಬದಲಾವಣೆಗೆ ಕಾರಣವಾಗುತ್ತಾ ಎಂಬ ಅನುಮಾನ ಕ್ಷೇತ್ರದಾದ್ಯಂತ ಹರಿದಾಡಲಾರಂಭಿಸಿದೆ.
2008 ರಿಂದ ಈವರೆಗೆ ಮೂರು ಸಾರ್ವತ್ರಿಕ, ಒಂದು ಉಪಚುನಾವಣೆ ಕಂಡಿರುವ ವಿಜಯನಗರ ಕ್ಷೇತ್ರದಲ್ಲಿ ಆನಂದ್‍ಸಿಂಗ್ ಗೆಲುವು ದಾಖಲಿಸಿದ್ದಾರೆ. 2008, 2013ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2018ರಲ್ಲಿ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದ ಸಿಂಗ್, ಮತ್ತೆ ಆಪರೇಷನ್ ಕಮಲದ ಮೂಲಕ ಘರ್ ವಾಪಸಿಯಾದರು. ಮತದಾರರು ಮಾತ್ರ ಸಿಂಗ್‍ಪರವಾಗಿ ನಿಂತಿರುವುದು ಸಾಕ್ಷಿಯಾಗಿದೆ.
2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಆನಂದ ಸಿಂಗ್ 30 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿ, ತಮ್ಮ ಪ್ರಾಬಲ್ಯವನ್ನು ಮೆರೆದರು. ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರಿಗೆ ನೀಡಿರುವ ಭರವಸೆಯಂತೆ ನೂತನ ವಿಜಯನಗರ ಜಿಲ್ಲೆ ಸ್ಥಾಪಿಸಿದ್ದು, ಸರ್ಕಾರದ ಮೇಲಿನ ಆನಂದ್‍ಸಿಂಗ್ ಪ್ರಭಾವಕ್ಕೆ ಸಾಟಿ ಇಲ್ಲ ಎನ್ನುವಂತಾಯಿತು. ನೂತನ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ, ತಮ್ಮ ಹೊಸ ಬಂಗ್ಲೆ ಪಕ್ಕದಲ್ಲೇ ಬಿಜೆಪಿ ಜಿಲ್ಲಾ ಕಚೇರಿಗೆ ಶಂಕು ಸ್ಥಾಪನೆ ನೆರವೇರಿಸುವ ಮೂಲಕ ಪಕ್ಷದಲ್ಲಿ ತಮ್ಮ ಸ್ಥಾನಮಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.
ರಾತ್ರೋರಾತ್ರಿ ದಾರ್ಶನಿಕರ ಪ್ರತಿಮೆ ಸ್ಥಾಪಿಸಿ ಪ್ರಬಲ ಸಮುದಾಯಗಳನ್ನು ಸೆಳೆಯುವ ಚಾಣಾಕ್ಷತೆ ಮೆರೆದಿದ್ದಾರೆ. ಸದ್ಯ ಕಾರ್ಯಕರ್ತರ ಅಸಮಾಧಾನದ ಮಧ್ಯ ಸಚಿವ ಆನಂದ್‍ಸಿಂಗ್ ತನ್ನ ಪುತ್ರ ಸಿದ್ಧಾರ್ಥಸಿಂಗ್‍ಗೆ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರ ಪಡೆ, ನೆಟ್‍ವರ್ಕ್ ಬೆಳೆಸಿಕೊಂಡಿರುವುದು ಪ್ಲಸ್ ಪಾಯಿಂಟ್.
`ಸಿಂಗ್’ ಮಣಿಸಲು `ಕೈ’ನಾಯಕರ ಕಾರ್ಯತಂತ್ರ
ಆಪರೇಷನ್ ಕಮಲದಿಂದಾಗಿ 2019ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್‍ನಿಂದ ಆಯ್ಕೆಯಾಗಿ ಬಿಜೆಪಿಗೆ ಜಿಗಿದ ಶಾಸಕರಲ್ಲಿ ಆನಂದ್‍ಸಿಂಗ್ ಕೂಡಾ ಒಬ್ಬರು. ಹೀಗಾಗಿ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕೈಕೊಟ್ಟ ಶಾಸಕರಿಗೆ ಪಾಠ ಕಲಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ. ಈ ಬಾರಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಒಂದು ಡಜನ್‍ನಷ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೂ ಅಂತಿಮವಾಗಿ ಮಾಜಿ ಶಾಸಕರಾದ ಎಚ್.ಆರ್.ಗವಿಯಪ್ಪ ರವರಿಗೆ ಟಿಕೆಟ್ ಘೋಷಿಸಿದ್ದರೂ ಆಕಾಂಕ್ಷಿಗಳಾದ ಸಿರಾಜ್ ಶೇಖ್, ಕೊಪ್ಪಳ ಜಿ.ಪಂ.ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ವಿನಯ್ ಶೆಟ್ಟರ್, ಪಕ್ಷದ ಹಿರಿಯರಾದ ವೈ.ವಿ.ಘೋರ್ಪಡೆ, ದೀಪಕ್‍ಸಿಂಗ್, ಕುರಿ ಶಿವಮೂರ್ತಿ ಪ್ರಮುಖರು. ತನ್ನ ಅಧಿಕೃತ ಅಭ್ಯರ್ಥಿ ಎಂದು ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ ರವರಿಗೆ ಟಿಕೆಟ್ ಘೋಷಿಸಿದ್ದು ಬಹುತೇಕ ಎಲ್ಲಾ ನಾಯಕರೊಂದಿಗೆ ಒಗ್ಗಟ್ಟಿನಿಂದ ಪ್ರಚಾರ ಆರಂಭಿಸಿದ್ದು ಕೈ ನಾಯಕರ ಒಗ್ಗಟ್ಟು ತಂತ್ರದ ಮೂಲಕ ಕಟ್ಟಿಹಾಕಲು ಹೊರಟಿದ್ದಾರೆ.
ಇತರೆ ಪಕ್ಷಗಳು ಸ್ಪರ್ಧೆಗೆ ಸೀಮಿತ
ವಿಜಯನಗರ ಕ್ಷೇತ್ರದಲ್ಲಿ 2008ರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ತೆ ನೇರ ಹಣಾಹಣಿ ಏರ್ಪಡುತ್ತಿದ್ದು, ಚುನಾವಣಾ ಕಣದಲ್ಲಿ ಇತರೆ 10 ವಿವಿಧ ಪಕ್ಷ ಹಾಗೂ ಪಕ್ಷೇತರರು ಸ್ಪರ್ಧೆಗೆ ಸೀಮಿತ ಎನ್ನುವಂತಾಗಿದೆ. ಜೆಡಿಎಸ್ ಸ್ಪರ್ಧೆಗೆ ಮುಂದಾಗದಿರುವುದು, ಆಮ್ ಆದ್ಮಿ ಪಕ್ಷದಿಂದ ಶಂಕರ ದಾಸ್ ಟಿಕೆಟ್ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಕೆಆರ್‍ಎಸ್ ಮಂಜುನಾಥ ಎಂಬುವವರಿಗೆ, ಎಸ್‍ಡಿಪಿಐ, ಸಿಪಿಎಂ ಮತ್ತಿತರೆ ಪಕ್ಷಗಳು ಸಾಂಕೇತಿಕವಾಗಿ ಸ್ಪರ್ಧಿಸಿದಂತಾಗಿದೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಆನಂದ ಸಿಂಗ್‍ಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಮತಗಳಿಕೆಯಲ್ಲಿ ತೀವ್ರ ಪೈಪೋಟಿಯೊಡ್ಡಿದ್ದರು. ಆ ಚುನಾವಣೆಯಲ್ಲಿ ಕೇವಲ 8228 ಮತಗಳಿಂದ ಸಿಂಗ್ ಪ್ರಯಾಸದ ಗೆಲುವು ಸಾಧಿಸಿದರು. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಎಚ್.ಆರ್.ಗವಿಯಪ್ಪ ಈ ಬಾರಿಯ ಕಾಂಗ್ರೆಸ್ ಆಭ್ಯರ್ಥಿಯಾಗುವ ಮೂಲಕ ಆನಂದಸಿಂಗ್ ಬದಲು ಈ ಭಾರಿ ಪುತ್ರ ಸಿದ್ಧಾರ್ಥಸಿಂಗ್ ಸ್ಪರ್ಧೆ ಉಂಟಾಗಿದೆ.
ವೈಯಕ್ತಿಕ ವರ್ಚಸ್ಸಿಗೆ ಮಣೆ
ಚುನಾವಣೆಯಲ್ಲಿ ವಿವಿಧ ಸಮುದಾಯಗಳು ನೀರ್ಣಾಯಕವಾಗಿದ್ದರೂ ಮತದಾರರು ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸಿಗೆ ಮಣೆ ಹಾಕುತ್ತಿದ್ದಾರೆ. ಕಳೆದ ನಾಲ್ಕು ಚುನಾವಣೆಯಲ್ಲಿ ಆನಂದ ಸಿಂಗ್ ಕೈಹಿಡಿದಿರುವುದೇ ಅದಕ್ಕೆ ಸಾಕ್ಷಿ. ಪ್ರಬಾವಿ ಆನಂದ ಸಿಂಗ್ ವಿರುದ್ಧ `ಸಂಪನ್ಮೂಲ’ ಸುರಿಯುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತಿನಂತೆ ಗವಿಯಪ್ಪರವರಿಗೆ ಟಿಕಿಟ್ ಘೋಷಣೆ ಮಾಡಿದೆ.
ಬಿಜೆಪಿ: ಈಗಾಗಲೇ ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಸುವ ಮೂಲಕ ಕಾರ್ಯಕರ್ತರನ್ನು ಪಕ್ಷದ ಬಲವರ್ದನೆ, ಚುನಾವಣಾ ಕಾರ್ಯಕ್ಕೆ ಧುಮ್ಮುಕ್ಕುವಂತೆ ಮಾಡಿದೆ. ವಿವಿಧ ಪ್ರಕೋಷ್ಠಗಳ ಮೂಲಕ ತಳ ಮಟ್ಟದ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದೆ. ಮನೆ ಮನೆ ಭೇಟಿ, ಇತ್ಯಾದಿಗಳಲ್ಲಿ ತೊಡಗಿದೆ.
ಇನ್ನು ಏಕತೆಯ ಮಂತ್ರ ಜಪದಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ ನಂತರ ಕ್ಷೇತ್ರದಲ್ಲಿ ರ್ಯಾಲಿಗಳನ್ನು ನಡೆಯುತ್ತಿವೆ. ಕಾರ್ಯಕರ್ತರ ಮನೆಗಳಿಗೆ ತಮ್ಮ ತಮ್ಮ ನಾಯಕರೊಂದಿಗೆ ಭೇಟಿ ನೀಡುತ್ತಾ ಬಿಜೆಪಿಯನ್ನು ಬಗ್ಗು ಬಡೆಯುವ ತಂತ್ರಕಾರ್ಯದಲ್ಲಿ ತೊಡಗಿದೆ.