ಮುಂದುವರೆದ ಸೋಂಕು – ಸಾವು : ಆತಂಕ

ನವದೆಹಲಿ, ಜೂ.೩- ದೇಶದಲ್ಲಿ ಕಡಿಮೆಯಾಗುತ್ತಿರುವ ಕೊರೊನಾ ಸೋಂಕು ಸಂಖ್ಯೆ ಕಳೆದ ಎರಡು ದಿನಗಳಿಂದ ಮತ್ತೆ ಹೆಚ್ಚಳ ಕಂಡಿದೆ. ನಿನ್ನೆಗಿಂತ ಇಂದು ತುಸು ಸೋಂಕಿನ ಪ್ರಮಾಣ ಹೆಚ್ಚಾಗಿದೆ.

ನಿನ್ನೆ ಮೂರು ಸಾವಿರ ದಾಟಿದ ಸೋಂಕಿನ ಸಾವಿನ ಪ್ರಮಾಣ ಇಂದು ಅದರ ಒಳಗೆ ದಾಖಲಾಗಿದೆ. ಈ ಮೂಲಕ ೩೫ ದಿನಗಳ ನಂತರ, ಸಾವಿನ ಸಂಖ್ಯೆ ಕಡಿಮೆ ದಾಖಲಾಗಿದೆ.

ದಿನನಿತ್ಯ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. ಇದು ಸಹಜವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧,೩೪,೧೫೪ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನಿಂದ ೨,೮೮೭ ಮಂದಿ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ೨,೧೧,೪೯೯ ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಹೊಸದಾಗಿ ದಾಖಲಾಗಿರುವ ಸೋಂಕು ಮತ್ತು ಸಾವಿನ ಸಂಖ್ಯೆಯಿಂದಾಗಿ ದೇಶದಲ್ಲಿ ಇದುವರೆಗೂ ಒಟ್ಟಾರೆ ಸೋಂಕಿನ ಸಂಖ್ಯೆ ೨,೮೪,೪೧,೯೮೬ಗೆ ಏರಿಕೆಯಾಗಿದೆ. ಅಲ್ಲದೆ ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೨,೬೩,೯೦,೫೮೪ಕ್ಕೆ ಏರಿಕೆಯಾಗಿದೆ. ಇಲ್ಲಿಯ ತನಕ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೩,೩೭,೯೮೯ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ನಿತ್ಯ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ದಾಖಲೆ ಬರೆಯುತ್ತಿದ್ದ ಮಹಾರಾಷ್ಟ್ರ, ದೆಹಲಿ, ಪಂಜಾಬ್, ಹರಿಯಾಣ, ರಾಜಸ್ತಾನ, ಕರ್ನಾಟಕ , ಪಶ್ಚಿಮ ಬಂಗಾಳ, ಕೇರಳ ,ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಇಳಿಮುಖವಾಗಿದೆ. ಆದರೂ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ದೂಡಿದೆ

ಸಕ್ರಿಯ ಪ್ರಕರಣ ಇಳಿಕೆ:.

ದಿನದಿಂದ ದಿನಕ್ಕೆ ದೇಶದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಸೋಂಕಿಗಿಂತ ಚೇತರಿಕೆ ಪ್ರಮಾಣ ಅಧಿಕವಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.

ಮೇ ಮಧ್ಯಭಾಗದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೭ ಲಕ್ಷ ದಾಟಿತ್ತು ಇದೀಗ ಈ ಸಂಖ್ಯೆ ೧೭ ಲಕ್ಷ ಆಜುಬಾಜಿನಲ್ಲಿ ಇದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧೭,೧೩,೪೧೩ ರಷ್ಟಿದೆ.

೩೫,೩೭ಕೋಟಿಗೆ ಪರೀಕ್ಷೆ:

ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೧,೫೯,೮೭೩ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ- ಐಸಿಎಂಆರ್ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಇಲ್ಲಿಯತನಕ ೩೫,೩೭,೮೨,೬೪೮ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಸರಾಸರಿ ೨೦ ಲಕ್ಷಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ಮಾಡುತ್ತಿರುವುದಾಗಿ ಐಸಿಎಂಆರ್ ತಿಳಿಸಿದೆ

೨೨ ಕೋಟಿಗೂ ಅಧಿಕ ಲಸಿಕೆ

ದೇಶದಲ್ಲಿ ಕೊರೋನಾ. ಸೋಂಕಿನ ಲಸಿಕೆ ಅಭಾವದ ನಡುವೆಯೂ ಇಲ್ಲಿಯ ತನಕ ೨೨ ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ನಿನ್ನೆ ಸಂಜೆ ತನಕ ದೇಶದಲ್ಲಿ ೨೨,೧೦,೪೩,೬೯೩ ಮಂದಿಗೆ ಲಸಿಕೆ ಹಾಕಲಾಗಿದೆ ಮುಂದಿನ ದಿನಗಳಲ್ಲಿ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡುವುದಾಗಿ ತಿಳಿಸಿದೆ

ಶೇ.೯೨.೪೮ ಚೇತರಿಕೆ:

ದೇಶದಲ್ಲಿ ದಿನನಿತ್ಯ ಕೊರೊನಾ ಸೋಂಕು ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕುಸಿದಿದ್ದ ಚೇತರಿಕೆ ಪ್ರಮಾಣ ಮತ್ತೆ ಹೆಚ್ಚಾಗುತ್ತಿದೆ.

ಇಂದು ಬೆಳಗ್ಗೆ ತನಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಪ್ರತಿಶತ ಸಂಖ್ಯೆ ೯೨.೪೮ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೋಂಕು ತಡೆಗೆ ಕೈಗೊಂಡ ಬಿಗಿ ಕ್ರಮಗಳಿಂದಾಗಿ ದೇಶದ ಹಲವು ಭಾಗಗಳಲ್ಲಿ ಸೋಂಕು ಸಂಖ್ಯೆ ಇಳಿಮುಖವಾಗಿದೆ. ಜೊತೆಗೆ ಚೇತರಿಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ