ಮುಂದುವರೆದ ಸಾರಿಗೆ ಮುಷ್ಕರ: ಖಾಸಗಿ ವಾಹನಗಳದ್ದೇ ದರ್ಬಾರ್

ಕಲಬುರಗಿ:ಏ.18:ಆರನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ತಮ್ಮ ಮುಷ್ಕರ ಮುಂದುವರೆಸಿದ್ದರಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳದೇ ದರ್ಬಾರ್ ಎದ್ದುಕಂಡಿತು.
ಕ್ರೋಜರ್ ಜೀಪ್‍ಗಳು, ಖಾಸಗಿ ಬಸ್‍ಗಳು ಕೇಂದ್ರ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಲುಗಡೆಯಾಗಿದ್ದವು. ಕೇವಲ ಬೆರಳೆಣಿಕೆಯಷ್ಟು ಸಾರಿಗೆ ಸಂಸ್ಥೆಯ ಬಸ್‍ಗಳು ಮಾತ್ರ ಚಲಿಸಿದವು. ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸಿದರು.
ಆದಾಗ್ಯೂ, ನಿಗದಿತ ಸ್ಥಳಕ್ಕೆ ಹೋಗಲು ಸಾರಿಗೆ ಬಸ್‍ಗಳು ಇರದೇ ಇದ್ದುದರಿಂದ ಪ್ರಯಾಣಿಕರ ಪರದಾಟ ಮುಂದುವರೆಯಿತು. ಅನೇಕ ಪ್ರಯಾಣಿಕರು ಬಸ್‍ಗಾಗಿ ನಿಲ್ದಾಣದಲ್ಲಿ ಗಂಟೆಗಂಟಲೇ ಗಂಟು, ಮೂಟೆಗಳೊಂದಿಗೆ, ಚಿಕ್ಕ ಮಕ್ಕಳೊಂದಿಗೆ ಕಾಯುತ್ತಿರುವ ದೃಶ್ಯಗಳು ಕಂಡುಬಂದವು.
ಈಗಾಗಲೇ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮುಷ್ಕರ ನಿರತ ಹಲವು ನೌಕರರನ್ನು ವಜಾಗೊಳಿಸಿದ್ದು, ಇನ್ನೂ ಕೆಲವರನ್ನು ಅಮಾನತ್ತಿಗೆ ಒಳಪಡಿಸಿದ್ದು, ಮತ್ತೆ ಹಲವರನ್ನು ವರ್ಗಾವಣೆಗೊಳಿಸಿದ್ದು, ಇನ್ನೂ ಹಲವರಿಗೆ ನೋಟಿಸ್ ಜಾರಿ ಮಾಡಿದ್ದು ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಸಹ ಸಾರಿಗೆ ನೌಕರರು ಮುಷ್ಕರವನ್ನು ಹಿಂಪಡೆಯುತ್ತಿಲ್ಲ.