ಮುಂದುವರೆದ ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ ಬಸ್‌ಗಳು

ತುಮಕೂರು, ಏ. ೮- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆ ನಡೆಸುತ್ತಿರುವ ಮುಷ್ಕರ ೨ನೇ ದಿನವಾದ ಇಂದೂ ಮುಂದುವರೆದಿದ್ದು, ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಪರ್ಯಾಯವಾಗಿ ಕಾರ್ಯಾಚರಣೆ ನಡೆಸಿದರೂ ಪ್ರಯಾಣಿಕರಿಗೆ ಸಂಪೂರ್ಣ ತೃಪ್ತಿಕರ ಸೇವೆ ದೊರೆಯುತ್ತಿಲ್ಲ.
ಸಾರ್ವಜನಿಕರು ಎಂದಿನಂತೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ತೆರಳಲು ಸಾರಿಗೆ ಬಸ್‌ಗಳಿಲ್ಲದೆ, ಅವುಗಳ ಸ್ಥಾನದಲ್ಲಿದ್ದ ಬೆರಳೆಣಿಕೆಯ ಖಾಸಗಿ ಬಸ್‌ಗಳಿಗೆ ಹತ್ತಬೇಕೆ, ಬೇಡವೆ ಎಂಬ ಗೊಂದಲದಲ್ಲಿಯೇ ಇದ್ದಂತೆ ಕಂಡ ಬಂದಿತು. ಕೆಲವರು ಖಾಸಗಿ ಬಸ್‌ಗಳಿಗೆ ಹತ್ತಲು ಹಿಂದೇಟು ಹಾಕಿದ ಪ್ರಸಂಗಗಳು ನಡೆದವು.
ನಗರದಿಂದ ಜಿಲ್ಲೆಯ ೧೦ ತಾಲ್ಲೂಕು ಕೇಂದ್ರಗಳಾದ ತಿಪಟೂರು, ಕುಣಿಗಲ್, ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಸಿರಾ, ಗುಬ್ಬಿ, ತುರುವೇಕೆರೆಗೆ ತೆರೆಳಲು ಸಮರ್ಪಕ ಬಸ್ ಸೌಲಭ್ಯ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾರಿಗೆ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ,ಪ್ರಯಾಣಿಕರಿಗೆ ತೊಂದರೆಯಾಗದ ರೀತಿ, ಖಾಸಗಿ ಸಾರಿಗೆ ಸೇವೆ ಉಪಯೋಗಿಸಿಕೊಳ್ಳಲು ತೀರ್ಮಾನಿಸಿ ಅಗತ್ಯ ಕ್ರಮ ಕೈಗೊಂಡಿದ್ದರೂ ಸಹ ಅಂತಹ ದೊಡ್ಡ ಪ್ರಮಾಣದ ಪ್ರಯೋಜನವಾದಂತೆ ಕಂಡು ಬಂದಿಲ್ಲ.
ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ಮಾತನಾಡಿ, ತುಮಕೂರು ಡಿಪೋದಿಂದ ಮಧ್ಯಾಹ್ನ ೧೨ ಗಂಟೆ ವೇಳೆಗೆ ೩೧೦ ಬಸ್‌ಗಳು ಹೊರಡಬೇಕಾಗಿತ್ತು. ಆದರೆ ಇದುವರೆಗೂ ಒಂದು ಸಹ ಕಾರ್ಯಾಚರಣೆ ನಡೆಸಿಲ್ಲ. ಈಗಾಗಲೇ ಮುಷ್ಕರ ನಿರತ ಚಾಲಕರು, ನಿರ್ವಾಹಕರೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೂ ಯಾವುದೂ ಫಲಪ್ರದವಾಗಿಲ್ಲ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ರಾಜು ಮಾತನಾಡಿ, ಕೆ.ಎಸ್.ಆರ್.ಟಿ.ಸಿ.ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ೫೫೦ ಬಸ್ಸುಗಳನ್ನು ಓಡಿಸಲು ಸಾರಿಗೆ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಖಾಸಗಿ ಬಸ್‌ಗಳ ಜತೆಗೆ, ಮ್ಯಾಕ್ಸಿಕ್ಯಾಬ್, ಮಿನಿ ಬಸ್, ಟೆಂಪೋ ಇನ್ನಿತರ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಲಹೆಯಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.