ಮುಂದುವರೆದ ಲಾಕ್‍ಡೌನ್ ಜನ, ವಾಹನ ಸಂಚಾರ ವಿರಳ

ಬಳ್ಳಾರಿ ಏ 25 : ಕರೋನಾ ಸೋಂಕಿನ ನಿಯಂತ್ರಣಕ್ಕಾಗಿ ಘೋಷಣೆ ಮಾಡಿರುವ ವಾರಾಂತ್ಯದ ಲಾಕ್‍ಡೌನ್ ನಿನ್ನೆಯಂತೆ ಇಂದು ಸಹ ಮುಂದುವರೆದಿದ್ದು. ನಗರದಲ್ಲಿ ಬೆಳಿಗ್ಗೆ 10 ರಿಂದ ವಾಹನ ಮತ್ತು ಜನರ ಸಂಚಾರ ವಿರಳವಾಗಿತ್ತು. ಆಂದ್ರ ಮತ್ತು ರಾಜ್ಯದ ಕೆಲ ಸಾರಿಗೆ ಬಸ್‍ಗಳ ಸಂಚಾರ, ಔಷಧಿ ಮಳೆಗೆಗಳು, ಪೆಟ್ರೋಲ್ ಬಂಕ್, ಎಟಿಎಂ ಕೇಂದ್ರಗಳು ಬಿಟ್ಟು ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯವಾದ ಹಾಲು ಹಣ್ಣು, ದಿನಸಿ ಖರೀದಿಗೆ ಅವಕಾಶ ನೀಡಿದ್ದರಿಂದ ಜನತೆ ಒಂದಿಷ್ಟು ಅಲ್ಲಲ್ಲಿ ಸಂಚರಿಸಿದರು. ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ತರಕಾರಿ ಮಾರುಕಟ್ಟೆ ಇಂದು ಆರಂಭಿಸಲಾಗಿದ್ದು ಬೆಳಿಗ್ಗೆ 10 ನಂತರ ಮುಚ್ಚಲಾಯಿತು. ದಿನಸಿ ಖರೀದಿಗಾಗಿ ಮಾರುಕಟ್ಟೆಗಳಿಗೆ, ಅಂಗಡಿಗಳಿಗೆ ಓಡಾಟ ಮಾಡಿದ್ದರು.
ಪೊಲೀಸರು. ನಗರದ ಪ್ರಮುಖ ಸರ್ಕಲ್‍ಗಳಲ್ಲಿ, ರಸ್ತೆಗಳಲ್ಲಿ ಪೊಲೀಸರು ನಿಂತು ಅನಾವಶ್ಯಕವಾಗಿ ಓಡಾಡುವವರನ್ನು ತಡೆದು ದಂಡ ಹಾಕುವ ಕೆಲಸ ಮಾಡುತ್ತಿದ್ದರು. ಜನಸಂಚಾರ ವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ.
ಪೊಲೀಸರು ಸಂಚಾರವನ್ನು ಸಂಪೂರ್ಣ ಬಂದ್ ಮಾಡದಿರುವಾಗ ವಿನಾಕಾರಣ ರಸ್ತೆಗಳಿಗೆ ಅಡ್ಡಗಟ್ಟಿ, ರೌಂಡ್ ಹೊಡೆದುಕೊಂಡು ಸಂಚರಿಸಲು ಅನುವು ಮಾಡಿಕೊಟ್ಟಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ಮಾತ್ರ ತಿಳಿಯದಾಗಿದೆ.
ಲಾಕ್‍ಡೌನ್ ಇದ್ದರೂ, ನಡೆಯುತ್ತಿರುವ ಪಾಲಿಕೆ ಚುನಾವಣೆಯಿಂದಾಗಿ ಅನೇಕ ಮುಖಂಡರು ಕಾರುಗಳಲ್ಲಿ ಓಡಾಟ ನಡೆಸಿ ಆಯಾ ವಾರ್ಡುಗಳಿಗೆ ತೆರಳಿ ಚುನಾವಣೆ ಹೊಂದಾಣಿಕೆ, ತಂತ್ರಗಾರಿಕೆ ಮೊದಲಾದವುಗಳ ಕುರಿತು ಚರ್ಚಿಸುವ ಕಾರ್ಯ ನಡೆಸಿದ್ದು ಕಂಡು ಬಂತು.