ಮುಂದುವರೆದ ಮುಷ್ಕರ, ಪ್ರಯಾಣಿಕರು ಹೈರಾಣ

ಬೆಂಗಳೂರು,ಏ.೮- ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಹ ಯಾವುದೇ ಬಸ್ ಸಂಚಾರ ಕಂಡುಬಂದಿಲ್ಲ. ಹೀಗಾಗಿ ಪ್ರಯಾಣಿಕರು ಬಸ್ ಸಿಗದೇ ಪರದಾಡುವಂತಾಗಿದೆ.
ಈ ನಡುವೆ ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರಿಗೆ ಪಾಠ ಕಲಿಸಲು ರಾಜ್ಯ ಸರ್ಕಾರ ತರಬೇತಿ ನಿರತ ಚಾಲಕರಿಂದ ಬಸ್ ಓಡಿಸಲು ಮುಂದಾಗಿದೆ.
ಬೇಡಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬಿಗಿ ಪಟ್ಟು ಹಿಡಿದಿರುವ ಬೆನ್ನಲ್ಲೇ ಇಂದಿನಿಂದ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.
ತರಬೇತಿ ನಿರತ ಚಾಲಕ, ಕಂಡಕ್ಟರ್, ಮೆಕ್ಯಾನಿಕ್ ಇಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಸೂಚನೆ ನೀಡಿದ್ದು, ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಾರಿಗೆ ಬಸ್‌ಗಳ ಸಂಚಾರ ಬಂದ್ ಆಗಿದ್ದು, ಬಸ್ ಸಿಗದೇ ಪ್ರಯಾಣಿಕರು ಪರದಾಡುವಂತಾಗಿದೆ.
ರಾಜ್ಯದ ಹಲವು ನಗರಗಳಲ್ಲಿ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಲಗೇಜ್, ಮಕ್ಕಳನ್ನು ಹೊತ್ತು ಜನರು ಬಸ್ ಗಾಗಿ ಕಾಯುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ ಬಿಎಂಟಿಸಿ ಸೇರಿದಂತೆ ಸಂಸ್ಥೆಯ ನಾಲ್ಕು ಸಾರಿಗೆ ನಿಗಮದ ನೌಕರರು ಇಂದು ಕೂಡ ಕೆಲಸಕ್ಕೆ ಹಾಜರಾಗದಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ತಬ್ಧವಾಗಿರುವುದು ಮುಂದುವರೆದಿದೆ.
ಮುಷ್ಕರದ ಪರಿಣಾಮ ನಗರದಲ್ಲಿ ಇಂದು ಕೂಡ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯದ ಕಾರಣ ದಿನನಿತ್ಯ ಕೆಲಸ ಕಾರ್ಯಗಳಿಗೆ ಬಸ್‌ಗಳನ್ನೇ ನೆಚ್ಚಿಕೊಂಡ ಜನ ಬೇರೆ ವ್ಯವಸ್ಥೆ ಹುಡುಕಿಕೊಳ್ಳಲು ಪರದಾಡುತ್ತಿದ್ದಾರೆ.
ಬಸ್ ಸಂಚಾರ ಸ್ಥಗಿತದಿಂದ ನಗರದ ಮೆಜೆಸ್ಟಿಕ್ ಸ್ಯಾಟಲೈಟ್ ಯಶವಂತಪುರ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು ಮೌನ ಆವರಿಸಿದ್ದು ಬೆರಳೆಣಿಕೆಯ ಖಾಸಗಿ ಬಸ್‌ಗಳು ಓಡಾಟ ನಡೆಸಿವೆ.
ಬಸ್ ಸಂಚಾರ ಸ್ಥಗಿತಗೊಂಡಿರುವುದನ್ನು ತಿಳಿದಿರುವ ಸಾರ್ವಜನಿಕರು ಬಸ್ ನಿಲ್ದಾಣದ ಕಡೆ ಬರುವುದನ್ಜು ಕಡಿಮೆ ಮಾಡಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣವೂ ಖಾಲಿ ಖಾಲಿಯಾಗಿದ್ದು ಖಾಸಗಿ ಬಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಆಗಮಿಸಿದ್ದ ಜನ ನಿರಾಶರಾಗಿದ್ದಾರೆ.
ಖಾಸಗಿ ಬಸ್‌ಗಳು ಸರ್ಕಾರಿ ಬಸ್ ನಿಲ್ದಾಣಗಳಿಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವನ್ನೂ ನೀಡಲಾಗಿತ್ತು. ಮುಷ್ಕರಕ್ಕೆ ಹೆದರದೆ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ. ಹೆಚ್ಚುವರಿಯಾಗಿ ರೈಲುಗಳ ಸೇವೆ ಮತ್ತು ಬೆಂಗಳೂರಿನಲ್ಲಿ ಮೆಟ್ರೊ ರೈಲು ಸೇವೆಯನ್ನೂ ಹೆಚ್ಚಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.
ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಿಂದ ಬಿಗಿ ಭದ್ರತೆಯಲ್ಲಿ ಖಾಸಗಿ ಬಸ್’ಗಳ ಸಂಚಾರ ಆರಂಭವಾಗಿದೆ.
ಜಿಲ್ಲಾಡಳಿತ, ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗಾವಿ, ವಿಜಯಪುರ, ಗದಗ ಹಾಗೂ ವಿವಿಧ ಭಾಗಗಳಿಗೆ ಖಾಸಗಿ ಬಸ್’ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆಯೂ ಖಾಸಗಿ ಬಸ್ ಸಂಚಾರ ನಡೆಸಿವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಬೆಳಗಾವಿಯಲ್ಲೂ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯದಿದ್ದರದ ಖಾಸಗಿ ಬಸ್ ಕ್ಯಾಬ್ ಇತರ ಖಾಸಗಿ ವಾಹನ ಸಂಚಾರ ಹೆಚ್ಚಾಗಿದೆ.
ಖಾಸಗಿ ಬಸ್‌ಗಳು ಹುಬ್ಬಳ್ಳಿ- ಬೆಳಗಾವಿ ಮಾರ್ಗದಲ್ಲಿ ಸಂಚರಿಸುತ್ತಿವೆ. ಅವುಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ.
ಕಲಬುರ್ಗಿಯ ಆಯ್ದ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಮುಷ್ಕರದ ಮಾಹಿತಿ ಇದ್ದುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ. ಕೆಲ ಖಾಸಗಿ ಬಸ್‌ಗಳು ಹುಮನಾಬಾದ್-ಬೀದರ್, ಬಳ್ಳಾರಿ ಮಾರ್ಗದಲ್ಲಿ ಸಂಚಾರ ನಡೆಸಿದವು.
ಬಾಗಲಕೋಟೆಯಲ್ಲಿ ಬಸ್ ನಿಲ್ದಾಣಗಳಿಗೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ.