ಮುಂದುವರೆದ ಮಳೆ ಆರ್ಭಟ:ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜು ರಜೆ

ಬೆಂಗಳೂರು, ನ.18- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿರುವ ಹಿನ್ನೆಲೆ ಶಾಲೆ-ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 19, 20 ರಂದು ರಜೆ ಘೋಷಣೆ ಮಾಡಲಾಗಿದೆ ಎಂದು ಆಯಾ ಜಿಲ್ಲೆಗಳಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಆದರೆ, ಬೆಂಗಳೂರು ನಗರದಲ್ಲಿ ಸದ್ಯ ಶುಕ್ರವಾರ ಮಾತ್ರ ರಜೆ ನೀಡಿದ್ದು, ಪರಿಸ್ಥಿತಿ ಅನುಗುಣವಾಗಿ ಶನಿವಾರ ರಜೆ ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಂಜುನಾಥ ಹೇಳಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಕಳೆದ ಹತ್ತು ದಿನಗಳಿಂದ ಮಳೆಯಾಗುತ್ತಿದ್ದು, ಇನ್ನೂ ಮೂರ್ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ.ಇನ್ನೂ, ಮುಂದಿನ 48 ಗಂಟೆ ಧಾರಾಕಾರ ಮಳೆಯಾಗಲಿದ್ದು, ನ.24ರವರೆಗೂ ಮೋಡಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಭೀತಿ ಎದುರಾಗಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.