ಮುಂದುವರೆದ ಪಾಲಿಕೆ ಜಟಾಪಟಿ: ಕೈ, ದಳ ಸದಸ್ಯರ ಧರಣೆ

ಮೈಸೂರು: ಮಾ.16:- ನಗರಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಸದ್ಯಕ್ಕೆ ನಡೆಯುವಂತೆ ಕಾಣುತ್ತಿಲ್ಲ. ಸಂಪೂರ್ಣ ಸ್ಥಾಯಿ ಸಮಿತಿ ಸ್ಥಾನಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದ್ದು, ಬಿಜೆಪಿ ಇದಕ್ಕೆ ಮಣೆ ಹಾಕಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬುಧವಾರವೂ ಸಹ ಸ್ಥಾಯಿ ಸಮಿತಿ ಚುನಾವಣೆಯ ಜಟಾಪಟಿ ಮುಂದುವರೆಯಿತು.
ನಗರಪಾಲಿಕೆಯ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಪದೇ ಪದೇ ಮುಂದೂಡುತ್ತಿರುವ ಮೇಯರ್ ಶಿವಕುಮಾರ್ ಅವರ ನಡೆಯನ್ನು ಖಂಡಿಸಿ ನಗರಪಾಲಿಕೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಇಂದು ನಗರಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
?ಅನಾರೋಗ್ಯದ ನೆಪ ಹೇಳಿಕೊಂಡು ಹೋಗುತ್ತಿರುವ ಮೇಯರ್ ಮತ್ತು ಬಿಜೆಪಿಗೆ ಧಿಕ್ಕಾರ’, ‘ನ್ಯಾಯಕ್ಕಾಗಿ ನಮ್ಮ ಹೋರಾಟ, ಅನ್ಯಾಯಕ್ಕಾಗಿ ಭ್ರಷ್ಟರ ಚೀರಾಟ’ ಎಂಬ ಘೋಷಣಾ ಫಲಕಗಳನ್ನು ಹಿಡಿದು ನಗರಪಾಲಿಕೆ ಕಚೇರಿ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಕುಳಿತ ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಾದ ಮಾಜಿ ಮೇಯರ್‍ಗಳಾದ ಅಯೂಬ್ ಖಾನ್, ತನ್ನೀಂ, ಸದಸ್ಯ
ರಾದ ಎಸ್‍ಬಿಎಂ ಮಂಜು, ನಾಗರಾಜ್, ಶೋಭಾ ಮೋಹನ್, ಶ್ರೀಧರ್, ಭಾಗ್ಯ ಮಾದೇಶ್, ಕಾರ್ತಿಕ್, ಸವದ್ ಖಾನ್, ಸಮೀಉಲ್ಲಾ, ಆಶ್ವಿನಿ ಅನಂತು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಸಹ ಮುಂದೂಡಿಕೆ: ಇಂದು(ಗುರುವಾರ) ನಡೆಯಬೇಕಿದ್ದ ಕೌನ್ಸಿಲ್ ಸಭೆಯನ್ನು ಮುಂದೂಡಿರುವ ಮೇಯರ್ ತಮಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ಆಗಿಲ್ಲ ಎಂಬ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಬಿಜೆಪಿ ತಮ್ಮ ಪಟ್ಟು ಸಡಿಸಲು ಹಿಂದೇಟು ಹಾಕಿದೆ. ಈ ಚುನಾವಣೆ ಘೋಷಣೆವರೆಗೂ ಇದೇ ಮಾದರಿಯನ್ನು ಮುಂದುವರೆಸುವುದು ನಿಶ್ಚಲವಾಗಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಹಾಗೇನಾದರೂ ಆದಲ್ಲಿ ಮೇಯರ್ ಈ ಬಾರಿ ವಿಶೇಷ ಅಧಿಕಾರ ಬಳಸಿ ಬಜೆಟ್ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕಾನೂನು ತಜ್ಞರ ಮೊರೆ ಹೋಗಿದ್ದಾರೆಂಬ ಮಾತಿದೆ. ಹಾಗೊಂದು ವೇಳೆ ಆದರೆ, ಈ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರೇ ಇಲ್ಲದೆ ಬಜೆಟ್ ಆಗುವ ಮೂಲಕ ಮತ್ತೊಂದು ದಾಖಲೆ ಬರೆಯುವುದು ನಿಶ್ಚಲವಾಗಿದೆ.