ಮುಂದುವರಿದ ಬಗರಹುಕುಂ ಸಾಗುವಳಿದಾರರ ಸತ್ಯಾಗ್ರಹ

ಶಿರಹಟ್ಟಿ,ಸೆ14: ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಜಿಲಾಧಿಕಾರಿ ಹಾಗೂ ಡಿಎಫ್‍ಓ ಅವರನ್ನು ತಕ್ಷಣ ವಜಾಗೊಳಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ರೈತರ ವಿರೋಧಿಯಾಗಿರುವ ಇಬ್ಬರು ಅಧಿಕಾರಿಗಳು ಜಿಲ್ಲೆಯಲ್ಲಿ ಕೆಲಸ ಮಾಡಲು ಅರ್ಹ ವ್ಯಕ್ತಿಗಳಲ್ಲ. ಇಬ್ಬರು ಅಧಿಕಾರಿಗಳಿಂದಲೇ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಉತ್ತರ ಕರ್ನಾಟಕ ಮಹಾಸಭಾ ಬಗರ್‍ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಬಗರಹುಕುಂ ಸಾಗುವಳಿದಾರರ ಅನಿರ್ಧಿಷ್ಟ ಸತ್ಯಾಗ್ರಹ ಎರಡನೇ ದಿನ ಜರುಗಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿವೇಶನದಲ್ಲಿ ಭಾಗವಹಿಸಿರುವ ಶಾಸಕ ರಾಮಣ್ಣ ಲಮಾಣಿ ಸ್ವತಃ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಕ್ಷಣ ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಮನವಿ ಮಾಡಿದರೂ ಜಿಲ್ಲಾಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ತಾಲ್ಲೂಕಿನ ಪ್ರಥಮ ಪ್ರಜೆ ಶಾಸಕಿಗೆ ಈ ತರಹದ ಗೌರವ ನೀಡುವ ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಯಾವದೇ ಭರವಸೆ ನಮಗಿಲ್ಲ. ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ನಮ್ಮ ಧರಣಿಯನ್ನು ಹಿಂಪಡೆಯುವದಿಲ್ಲ ಎಂದು ರವಿಕಾಂತ ಅಂಗಡಿ ಸ್ಪಷ್ಟ ಸಂದೇಶ ನೀಡಿದರು.
ಮಕ್ಕಳು ಮರಿಯೊಂದಿಗೆ ಮಹಿಳೆಯರು ಹಾಗೂ ವೃದ್ದರು ಎರಡು ದಿನಗಳಿಂದ ಸತ್ಯಾಗ್ರಹ ನಡೆಸಿದ್ದರೂ ನನಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ಜಿಲ್ಲಾಧಿಕಾರಿಗಳ ನಡೆ ಅಕ್ಷಮ್ಯ ಅಪರಾಧವಾಗಿದೆ.ರೈತ ಬದುಕಿನ ಜೊತೆ ಚಲ್ಲಾಟವಾಡುತ್ತಿರುವ ಡಿಎಪ್‍ಓ ಹಾಗೂ ಜಿಲ್ಲಾಧಿಕಾರಿಗಳನ್ನು ಸರ್ಕಾರ ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಉಳುಮೆ ಮಾಡುತ್ತಿರುವ ಜಮೀನುಗಳಿಗೆ ಹಕ್ಕುಪತ್ರ ನೀಡದೇ 802 ಅರ್ಜಿಗಳನ್ನು ವಜಾ ಮಾಡಿದ್ದಾರೆ. ಸರ್ಕಾರ ಸದನ ಸಮೀತಿ ರಚನೆ ಮಾಡಿ ಕೂಲಂಕಷವಾಗಿ ಚರ್ಚಿಸಿ ಹಕ್ಕುಪತ್ರ ನೀಡುವ ಕುರಿತು ತಿರ್ಮಾನ ಕೈಗೊಳ್ಳುವುದಾಗಿ ಬೊಬ್ಬೆ ಹೊಡೆಯುತ್ತಿದ್ದು, ಈ ಕೆಲಸವು ಆಗಿಲ್ಲ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬಂಜಾರಾ ಸಮಾಜ ತಾಲ್ಲೂಕಾ ಘಟಕ ಅಧ್ಯಕ್ಷ ಶಿವಣ್ಣ ನೆಲೋಗಲ್ಲ, ಎನ್.ಟಿ. ಪೂಜಾರ ಮಾತನಾಡಿದರು. ಈರಣ್ಣ ಚವ್ಹಾಣ, ಶಿವು ಲಮಾಣಿ, ತಾವರೆಪ್ಪ ಲಮಾಣಿ, ಚಂದ್ರಕಾಂತ ಚಹ್ವಾಣ, ಕುಬೇರಪ್ಪ ಪವಾರ, ದನಸಿಂಗಪ್ಪ ಲಮಾಣಿ, ಲಕ್ಷ್ಮಣ ಲಮಾಣಿ, ಮಂಜುನಾಥ ಆರೆಪಲ್ಲಿ, ನಾಮದೇವ ಮಾಂಡ್ರೆ, ಶ್ರೀನಿವಾಸ ಬಾರ್ಬರ, ಹನುಮಂತ ತಳವಾರ ಮತ್ತಿತರರು ಉಪಸ್ಥಿತರಿದ್ದರು.