ಮುಂದಿನ 7 ದಿನ ಬೆಂಗಳೂರಿಗೆ ಕೊರೋನಾ ಆಘಾತ…!

ಬೆಂಗಳೂರು, ಮಾ.31- ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ ಬರೋಬ್ಬರಿ 2928 ಕೋವಿಡ್ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಮುಂದಿನ 7 ದಿನಗಳ ಕಾಲ ಕೋವಿಡ್ ಸೋಂಕು ಧೃಢಪಟ್ಟವರಿಗೆ ಚಿಕಿತ್ಸೆ ನೀಡಲು ಶೇ.10 ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಸೂಚಿಸಿರುವುದು ಆತಂಕಕ್ಕೆ ಎಡೆಮಾಡಿದೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್,
ನಗರದಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾಗುತ್ತಿದೆ. ಈ ಸಂಬಂಧ *ಖಾಸಗಿ ಆಸ್ಪತ್ರೆಗಳಲ್ಲಿ ಮುಂದಿನ 7 ದಿನಗಳ ಕಾಲ ಕೋವಿಡ್ ಸೋಂಕು ಧೃಢಪಟ್ಟವರಿಗೆ ಚಿಕಿತ್ಸೆ ನೀಡಲು ಶೇ.10 ರಷ್ಟು ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ತಮ್ಮ ತಮ್ಮ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮಾತನಾಡಲು ನೋಡಲ್ ಅಧಿಕಾರಿಗಳಿಗೆ ಮನವಿ ಮಾಡಿದರು.

ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟವರು ಬಹುತೇಕ ಹೋಮ್ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಸಿಮ್ಟಾಮ್ಯಾಟಿಕ್ ಇರುವರಿಗೆ ಸಾರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡಲು ಹೇಳಿದರು.

ನಗರದಲ್ಲಿ ಕಳೆದ ಫೆಬ್ರವರಿ ತಿಂಗಳ ಕೊನೆಯಿಂದ ಕೋವಿಡ್ ಪ್ರಕರಣಗಳು ಕ್ರಮೇಣ ಏರಿಕೆಯಾಗುತ್ತಿದ್ದು, ಇಂದು ಪ್ರತಿನಿತ್ಯ 1,500ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. 22 ರಿಂದ 40 ವರ್ಷದ ವಯೋಮಿತಿಯಲ್ಲಿರುವವರಿಗೇ ಹೆಚ್ಚು ಸೋಂಕು ದೃಢಪಡುತ್ತಿದ್ದು, ಹಿರಿಯ ವಯಸ್ಕರಿಗೆ ಹೆಚ್ಚು ಸೋಂಕು ಪತ್ತೆಯಾಗುತ್ತಿಲ್ಲ. ಸಾವಿನ ಪ್ರಮಾಣ ಶೇ. 0.5 ರಷ್ಟಿದ್ದು, ನಗರದಲ್ಲಿ ಸಾವಿನ ಪ್ರಮಾಣ ಕಡಿಮೆಯಿದೆ ಎಂದು ಹೇಳಿದರು.

ಸೋಂಕು ದೃಢಪಟ್ಟ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ಬಂದರೆ ಅವರಿಗೆ ಆಕ್ಸಿಜನ್ ವ್ಯವಸ್ಥೆಯಿಲ್ಲವೆಂದು ದಾಖಲು ಮಾಡಿಕೊಳ್ಳದೆ ಬೇರೆ ಆಸ್ಪತ್ರೆಗೆ ತೆರಳಲು ಸೂಚಿಸಬೇಡಿ. ಆಸ್ಪತ್ರೆಗೆ ಬಂದಂತಹ ಸೋಂಕಿತ ವ್ಯಕ್ತಿಯನ್ನು ಕೂಡಲೆ ಆಸ್ಪತ್ರಗೆ ದಾಖಲು ಮಾಡಿಕೊಂಡು ಚಿಕತ್ಸೆ ನೀಡಿ.

ಎಲ್ಲಾ ಆಸ್ಪತ್ರೆಗಳ ಮುಂಭಾಗ ಕೋವಿಡ್ ಚಿಕಿತ್ಸೆಗಾಗಿ ಎಷ್ಟು ಹಾಸಿಗೆಗಳಿವೆ, ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಯಾವ ಹಾಸಿಗೆ ಖಾಲಿಯಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಿದಾಗ ಆಸ್ಪತ್ರೆಗೆ ದಾಖಲಾಗಲು ಬಂದಂತಹ ವ್ಯಕ್ತಿಗೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಕೋವಿಡ್ ಬ್ಲಾಕ್‌ಗಳಿರಬೇಕು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಪ್ರತ್ಯೇಕವಾಗಿರಬೇಕು. ಕೋವಿಡ್ ಹಾಗೂ ಅನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಒಂದೇ ಸಿಬ್ಬಂದಿಯನ್ನು ನಿಯೋಜನೆ ಮಾಡಿರಬಾರದು ಎಂದು ಹೇಳಿದರು.