ಮುಂದಿನ 2 ವರ್ಷ ನಾನೇ ಸಿ.ಎಂ:ಬಿಎಸ್‌ವೈ

ಬೆಂಗಳೂರು,ಜೂ.೧೧- ಮುಂದಿನ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪುನರುಚ್ಛರಿಸಿದ್ದಾರೆ.
ಹಾಸನದಲ್ಲಿಂದು ಕೋವಿಡ್ ಸ್ಥಿತಿಗತಿಯ ಬಗ್ಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ೨ ವರ್ಷ ರಾಜ್ಯದ ಅಭಿವೃದ್ಧಿಗೆ ಶ್ರಮವಹಿಸಿ ದುಡಿದು ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರಿಗೆ ಹೆಸರು ಬರುವಂತೆ ಕೆಲಸ ಮಾಡುತ್ತೇನೆ ಎಂದರು.
ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಅರುಣ್‌ಸಿಂಗ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳಾಗುತ್ತಿದೆ. ಎರಡು ವರ್ಷ ಯಾವುದೇ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ. ನನ್ನ ಮೇಲೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವರಿಷ್ಠರು ಇಟ್ಟಿರುವ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವೆ. ಪ್ರಾಮಾಣಿಕವಾಗಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯ ಉಸ್ತುವಾರಿ ಹೇಳಿಕೆಯಿಂದ ನನಗೆ ೧೦೦ರಷ್ಟು ಬಲ ಬಂದಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲರ ಸಹಕಾರದಿಂದ ಒಳ್ಳೆಯ ಕೆಲಸ ಮಾಡುತ್ತೇನೆ ಎಂದರು.
ಹಾಸನ ವಿಮಾನ ನಿಲ್ದಾಣ
ಹಾಸನ ಜಿಲ್ಲೆಯ ಅಭಿವೃದ್ಧಿಗೆ ಹಣಕಾಸಿನ ಇತಿಮಿತಿಯಲ್ಲಿ ಹೆಚ್ಚಿನ ನೆರವು ಒದಗಿಸುವುದಾಗಿ ಹೇಳಿದ ಅವರು, ಹಾಸನ ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಅವರು ಹೇಳಿದವರಿಗೆ ನೀಡುವುದಾಗಿ ಹೇಳಿದರು.
ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಹಾವಳಿ ತಡೆಯಲು ಕ್ರಮಕೈಗೊಳ್ಳಲಾಗುವುದು ಎಂದರು. ಹಾಸನದಲ್ಲಿ ಕೊರೊನಾ ಸೋಂಕನ್ನು ನಿಗ್ರಹಿಸುವ ಸಂಬಂಧ ಸಭೆ ನಡೆಸಿದ್ದೇನೆ. ಅಧಿಕಾರಿಗಳು ಸೋಂಕಿನ ಪ್ರಮಾಣವನ್ನು ಶೇ. ೫ಕ್ಕೆ ಇಳಿಸುವ ಭರವಸೆ ನೀಡಿದ್ದಾರೆ ಎಂದರು.