ಮುಂದಿನ 10 ವರ್ಷಗಳು ‘ನೀರಾವರಿ ದಶಕ’ವೆಂದು ಘೋಷಿಸಿದ ಸಿಎಂ ಬೊಮ್ಮಾಯಿ

ಕೊಡೇಕಲ್(ಯಾದಗಿರಿ),ಜ.19: ಮುಂದಿನ 10 ವರ್ಷಗಳನ್ನು ನೀರಾವರಿ ದಶಕವೆಂದು ಘೋಷಿಸಲಾಗುವುದು;ಈ ಮೂಲಕ 10 ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಕೋಡೆಕಲ್ ಹೊರವಲಯದಲ್ಲಿ ಏರ್ಪಡಿಸಿದ್ದ 10863ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿಗಳು ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ 40.66ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದ ಗುರಿ ಇದ್ದು,ಇದುವರೆಗೆ 30ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲಾಗುತ್ತಿದ್ದು,ಬಾಕಿ ಉಳಿದ 10.66ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಸ್ಕಾಡಾ ತಂತ್ರಜ್ಞಾನ ಅಳವಡಿಕೆಯಿಂದ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನಿಗೆ ನೀರು:ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಃಶ್ಚೇತನ ಹಾಗೂ ಆಧುನೀಕರಣ ಯೋಜನೆ ಮತ್ತು ಸ್ಕಾಡಾ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನುಗಳಿಗೆ ನೀರು ಒದಗಿಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಈ ಸ್ಕಾಡಾ ತಂತ್ರಜ್ಞಾನದಿಂದಾಗಿ ಉತ್ತರ ಕರ್ನಾಟಕದ ಬರಪೀಡಿತ ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 4.50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ 1ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಅಂದರೇ ಅಚ್ಚುಕಟ್ಟು ಪ್ರದೇಶದ ಕೊನೆಯಂಚಿನ ಈ ರೈತರ ಜಮೀನುಗಳಿಗೆ ಇನ್ಮುಂದೆ ಸಮ ಪ್ರಮಾಣದಲ್ಲಿ ನೀರು ಲಭ್ಯವಾಗಲಿದೆ ಎಂದು ಹೇಳಿದ ಅವರು ಈ ತಂತ್ರಜ್ಞಾನದಿಂದ ನೀರಿನ ಬಳಕೆಯ ದಕ್ಷತೆ ಶೇ.20ರಷ್ಟು ಹೆಚ್ಚಾಗಲಿದೆ ಎಂದರು.
ಈ ಯೋಜನೆಯು ಇಡೀ ಏμÁ್ಯಖಂಡದಲ್ಲಿಯೇ ದೊಡ್ಡ ಯೋಜನೆಯಾಗಿದೆ. ಈ ರೀತಿಯ ಯೋಜನೆಗಳನ್ನು ಇನ್ಮುಂದೆಯೂ ಕರ್ನಾಟದಲ್ಲಿ ಅನುμÁ್ಠನಗೊಳಿಸಲಾಗುವುದು ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಥಳೀಯ ಶಾಸಕರು ಆಗಿರುವ ಸುರಪುರದ ರಾಜುಗೌಡ (ನರಸಿಂಹನಾಯಕ್) ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಭಗವಂತ ಖೂಬಾ, ಸಂಸದರಾದ ರಾಜಾ ಅಮರೇಶ್ವರ ನಾಯಕ್, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್, ಎ.ಎಸ್.ಪಾಟೀಲ್ ನಡಹಳ್ಳಿ,ರಮೇಶ ಸಿಂದಗಿ, ಸೋಮನಗೌಡ ಹಿಪ್ಪರಗಿ ಇದ್ದರು.