ಮುಂದಿನ 10 ದಿನ ಕಡು ಕಷ್ಟ ಎಚ್ಚರ: ನಾಳೆಯಿಂದ ಕರ್ಫ್ಯೂ ಜಾರಿ

ಬೆಂಗಳೂರು, ಏ.೯- ರಾಜಧಾನಿ ಬೆಂಗಳೂರಿನಲ್ಲಿ ನಾಳೆ ರಾತ್ರಿಯಿಂದ ಆರಂಭವಾಗುವ ಕೊರೋನಾ ಕರ್ಫ್ಯೂಗೆ ಬಿಬಿಎಂಪಿ ಸಂಪೂರ್ಣ ಸಿದ್ಧತೆ ಕೈಗೊಂಡಿದ್ದು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಅಪಾರ್ಟ್‌ಮೆಂಟ್ ಗಳ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.
ಜತೆಗೆ, ತುರ್ತು ಆರು ಸಾವಿರ ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು, ತೀವ್ರ ಸೋಂಕಿನಿಂದ ಬಳಲುತ್ತಿರುವವರನ್ನು ಇಲ್ಲಿಗೆ ದಾಖಲಿಸಲಾಗುವುದು. ಸರಣಿ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದರೆ, ಕಂಟೋನ್ಮೆಂಟ್ ಝೋನ್ ಎಂದು ಗುರುತಿಸಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿಂದು ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಮುಂದಿನ ಹತ್ತು ದಿನಗಳು ತುಂಬಾ ಕಷ್ಟಕರ ವಾಗಿದ್ದು, ಎಲ್ಲರೂ ಎಚ್ಚರವಹಿಸಬೇಕು. ರಾತ್ರಿ ಕರ್ಫ್ಯೂ ಹಿನ್ನೆಲೆ ಜನರ ಓಡಾಟ ತಗ್ಗಿಸಲಾಗುವುದು. ಭದ್ರತೆ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ, ಹಾಸಿಗೆ, ಮಾರ್ಷಲ್ ನಿಯೋಜನೆ ಪಾಲಿಕೆ ಮಾಡಲಿದೆ ಎಂದರು.
ದಿನಕ್ಕೆ ೧ ಲಕ್ಷ ತಪಾಸಣೆ:ನಗರದಲ್ಲಿ ನಿತ್ಯ ೫ ಸಾವಿರ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ದಿನಕ್ಕೆ ಒಂದು ಲಕ್ಷ ಕೊರೋನಾ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದ್ದು, ಒಂದು ಪ್ರಕರಣಕ್ಕೆ ೨೦ ಜನರ ತಪಾಸಣೆ ಮಾಡಲಾಗುವುದು. ಸಾರ್ವಜನಿಕರು ಸಹ ಪರೀಕ್ಷೆ ನಡೆಸಲು ಮನೆಗೆ ಬಂದಾಗ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜ್ವರ ಕೇಂದ್ರ ಚಾಲ್ತಿ: ಸದ್ಯ ಪಾಲಿಕೆಯಲ್ಲಿ ಇರುವ ಎಲ್ಲ ಜ್ವರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಬರುವವರಲ್ಲಿ ವಿಷಮ ಶೀತ ಜ್ವರ ಮಾದರಿ ಲಕ್ಷಣ(ಐಎಲ್‌ಎ), ತೀವ್ರ ಉಸಿರಾಟದ ತೊಂದರೆ(ಸಾರಿ) ಲಕ್ಷಣ ಕಂಡು ಬಂದರೆ ಅವರ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.
೨೦೦೦ ಗೃಹ ರಕ್ಷಕರ ನಿಯೋಜನೆ: ಕೊರೋನಾ ನಿಯಮ ಪಾಲನೆಗೆ ಸದ್ಯ ಇರುವ ಮಾರ್ಷಲ್‌ಗಳ ಸಂಖ್ಯೆ ಸಾಕಾಗುವುದಿಲ್ಲ. ಜನಸಂದಣಿ ಪ್ರದೇಶಗಳಲ್ಲಿ ನಿಗಾ ವಹಿಸಲು ಎರಡು ಸಾವಿರ ಗೃಹರಕ್ಷಕ ಸಿಬ್ಬಂದಿ ನಿಯೋಜಿಸುವಂತೆ ಈಗಾಗಲೇ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ. ವಿಶೇಷ ತಂಡ ರಚಿಸಿ ವಸತಿ ಸಮುಚ್ಛಯ ನಿವಾಸಿಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಹಾಸಿಗೆ ಸೌಲಭ್ಯಕ್ಕೆ ಕ್ರಮ: ಖಾಸಗಿ ಆಸ್ಪತ್ರೆಗಳಲ್ಲಿ ಶೇ.೫೦ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕೆಂದು ಸೂಚಿಸಲಾಗಿದೆ. ಇದರಲ್ಲಿ ಸರ್ಕಾರದ ಶಿಫಾರಸು ಮಾಡಿರುವ ರೋಗಿಗಳಿಗೆ ಎಷ್ಟುಮೀಸಲಿಡಬೇಕೆಂಬ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು. ಸೋಂಕಿತರಿಗೆ ಚಿಕಿತ್ಸೆ ನೀಡಲು ಐಸಿಯು, ಆಕ್ಸಿಜನ್ ಸೌಲಭ್ಯ ಇರುವ ಹಾಸಿಗೆಗಳು ಸಾಕಷ್ಟುಇವೆ. ಯಾವುದೇ ಕೊರತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಗುಪ್ತ ಉತ್ತರಿಸಿದರು.

ಒಂದೇ ಸಹಾಯವಾಣಿ..!
ಕೋವಿಡ್ ಸಹಾಯವಾಣಿಗೆ ೧೯೧೨ ಒಂದೇ ಸಂಖ್ಯೆ ಬಿಡುಗಡೆ ಮಾಡಲಾಗುವುದು.
ಅಲ್ಲದೆ, ಈ ಹಿಂದಿನ ೧೦೪ , ೧೦೮ ಹೋಲಿಕೆ ಮಾಡಿದಾಗ ೧೯೧೨ ಸಂಖ್ಯೆಯೇ ಸೂಕ್ತ ಎನಿಸಿದೆ ಎಂದು ಗೌರವ್ ಗುಪ್ತ ತಿಳಿಸಿದರು.

ಕೊರೋನಾ ಕರ್ಫ್ಯೂ ಬಿಬಿಎಂಪಿ ತಯಾರಿ..!

  • ಒಂದು ಮನೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡರೆ ಅಕ್ಕಪಕ್ಕದ ಮನೆಯನ್ನು ಸೇರಿಸಿ ಕಂಟೋನ್ಮೆಂಟ್ ಝೋನ್ ಎಂದು ಪರಿಗಣನೆ
  • ಮುಂದಿನ ೧೦ ದಿನ ಬಹಳ ಕೊರೋನಾ ಕಷ್ಟಕರ
  • ಪಾಸಿಟಿವ್ ಬಂದ ಶೇ. ೮೦ ರಷ್ಟು ಜನ ಹೋಮ್ ಐಸೋಲೇಷನ್ ನಲ್ಲಿರುವಂತೆ ವ್ಯವಸ್ಥೆ
  • ಕೋವಿಡ್ ಕೇರ್ ಸೆಂಟರ್ ನಲ್ಲಿರುವುದು ಕಡ್ಡಾಯವಲ್ಲ
  • ಮೂರು ವಲಯಗಳಲ್ಲಿ ಹೊಸ ಕೋವಿಡ್ ಕೇರ್ ಸೆಂಟರ್ ರಚನೆ.
  • ಪ್ರತಿ ಸೆಂಟರ್ ನಲ್ಲಿ ೧೦೦ ಬೆಡ್ ಗಳ ವ್ಯವಸ್ಥೆ ಇರುವ ಕೊವೀಡ್ ಕೇರ್ ಸೆಂಟರ್ ನಿರ್ಮಾಣ