ಮುಂದಿನ ೧೦೦ ದಿನಗಳಲ್ಲಿ ಉದ್ದೇಶಿತ ಕಾಮಗಾರಿ ಪೂರ್ಣಗೊಳಿಸಲು ಶಾಸಕರು ಸೂಚನೆ

೧೧.೩೯ ಕೋಟಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಕೇಂದ್ರ ಸಮಗ್ರ ಅಭಿವೃದ್ಧಿಗೆ ಚಾಲನೆ
ರಾಯಚೂರು.ಜು.೩೧- ಘನತ್ಯಾಜ್ಯ ವಿಲೇವಾರಿ ಕೇಂದ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೇರಿದಂತೆ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಶೆಡ್ ನಿರ್ಮಿಸುವ ೧೧.೩೯ ಕೋಟಿಯ ಯೋಜನೆಗೆ ಇಂದು ಚಾಲನೆ ನೀಡಲಾಗಿದ್ದು, ಮುಂದಿನ ೧೦೦ ದಿನಗಳಲ್ಲಿ ಉದ್ದೇಶಿತ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತೇದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ಕಾಮಗಾರಿಗೆ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಸ್ವಚ್ಛ ಭಾರತ ಮಷಿನ್ ಯೋಜನೆಯಡಿ ಉದ್ದೇಶಿತ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಕೇಂದ್ರದಲ್ಲಿ ಶೆಡ್ ನಿರ್ಮಾಣ, ರಸ್ತೆ, ವಿದ್ಯುತ್ ಹಾಗೂ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವರ್ಗಕ್ಕೆ ಶೌಚಾಲಯ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ. ಅಲ್ಲದೆ ವಾರ್ಡ್‌ಗಳಲ್ಲಿ ಕಸ ವಿಲೇವಾರಿಯ ಶೆಡ್ ನಿರ್ಮಿಸಿ, ಘನತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ತರುವ ಪೂರ್ವ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಈ ಯೋಜನೆಯಡಿ ಕಲ್ಪಿಸಲಾಗಿದೆ.
ಉದ್ದೇಶಿತ ಕಾಮಗಾರಿ ನಾಲ್ಕು ತಿಂಗಳಲ್ಲಿ ಉದ್ದೇಶಿತ ಕಾಮಗಾರಿ ಜನರಿಗೆ ಅರ್ಪಿಸಲು ಸೂಚಿಸಲಾಗಿದೆ. ನಗರಸಭೆಯಲ್ಲಿ ಹೊಸ ಆಡಳಿತ ಬಂದ ನಂತರ ಹಂತ ಹಂತವಾಗಿ ಬಿರುಕು ಕಾರ್ಯ ತೀವ್ರಗೊಳಿಸಲಾಗುತ್ತದೆ. ಈಗಾಗಲೇ ಟ್ರ್ಯಾಕ್ಟರ್, ಲೈಟ್ ಹಾಗೂ ಇತರೆ ಸೌಲಭ್ಯಗಳನ್ನು ಸುಧಾರಿಸಲಾಗಿದೆ. ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರಿಂದ ಈ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವುದು ಸಾಧ್ಯವಾಗಿದೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ, ಉಪಾಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಆಯುಕ್ತರಾದ ಕೆ.ಗುರುಲಿಂಗಪ್ಪ, ಮಾಜಿ ಅಧ್ಯಕ್ಷ ಈ.ವಿನಯಕುಮಾರ, ರವೀಂದ್ರ ಜಲ್ದಾರ್, ಮಾಡಗಿರಿ ನರಸಿಂಹಲು, ಹರೀಶ ನಾಡಗೌಡ, ಯು. ನರಸರೆಡ್ಡಿ, ತಿಮ್ಮಪ್ಪ, ಎಸ್.ರಾಜು ಉಪಸ್ಥಿತರಿದ್ದರು.