ಮುಂದಿನ ವಾರ ದೇಶಾದ್ಯಂತ ಲಸಿಕೆ ಅಭಿಯಾನ


ನವದೆಹಲಿ,ಜ.೫- ದೇಶದಲ್ಲಿ ಕೊರೊನಾ ಸೋಂಕಿಗೆ ತುರ್ತು ಬಳಕೆ ಮಾಡಲು ಎರಡು ಲಸಿಕೆಗಳಿಗೆ ಅನುಮತಿ ನೀಡಿದ ನಡುವೆಯೇ ಮುಂದಿನವಾರದಿಂದ ದೇಶಾದ್ಯಂತ ಲಸಿಕೆ ಹಾಕುವ ಅಭಿಯಾನ ಆರಂಭವಾಗುವ ಸಾಧ್ಯತೆಗಳಿವೆ.
ಭಾರತ್ ಬಯೋಟೆಕ್ ದೇಸೀಯವಾಗಿ “ಕೋವಾಕ್ಸಿನ್’ ಮತ್ತು ಆಕ್ಸ್ ಫರ್ಡ್ ಮತ್ತು ಆಸ್ಟ್ರಾ ಝೆನಾಕಾ ಸಂಸ್ಥೆ “ಕೋವಿಶೀಲ್ಡ್” ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಜ.೨ ರಂದು ಭಾರತೀಯ ಔಷಧ ಮಹಾ ನಿಯಂತ್ರಕ ಸಂಸ್ಥೆ ತುರ್ತು ಬಳಕೆಗೆ ಅನುಮತಿ ನೀಡಿತ್ತು.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಅತಿ ಶೀಘ್ರದಲ್ಲಿ ದೇಶಾದ್ಯಂತ ಲಸಿಕೆ ಹಾಕುವ ಬೃಹತ್ ಅಭಿಯಾನ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ್ದ ನಡುವೆಯೇ ಮುಂದಿನವಾರದಿಂದ ಕೊರೋನಾ ಸೋಂಕಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ೩ ಕೋಟಿ ಜನರಿಗೆ ಆರಂಭದಲ್ಲಿ ಲಸಿಕೆ ಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಆರಂಭದಲ್ಲಿ ಕೊರೋನಾ ಸೇನಾನಿಗಳಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದಾದ ನಂತರ ೫೦ ರಿಂದ ೬೦ ದಶಲಕ್ಷ ಲಸಿಕೆಯನ್ನು ಸಾಮಾನ್ಯ ಜನರಿಗೆ ವಿತರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ತುರ್ತು ಅನುಮತಿ ಪಡೆದಿರು ಎರಡೂ ಕಂಪನಿಗಳು ಮೊದಲ ಹಂತದಲ್ಲಿ ಲಸಿಕೆ ಹಾಕುವಷ್ಟ ಸಂಗ್ರಹ ಮಾಡಿಕೊಂಡಿವೆ. ಹೀಗಾಗಿ ಮುಂದಿನವಾರದಿಂದ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
ಕೋವಿನ್ ಡಿಜಿಟಲ್ ವೇದಿಕೆಯ ಮೂಲಕ ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡ ಬಳಿಕ ಅವರನ್ನು ಪರಿಶೀಲಿಸಿ ಆ ಬಳಿಕ ಲಸಿಕೆ ಹಾಕಲು ಉದ್ದೇಶಿಸಲಾಗಿದೆ.

ಮಾನವೀಯ ನೆಲೆಗಟ್ಟಿನಲ್ಲಿ ಲಸಿಕೆ ಪೂರೈಕೆ
ನವದೆಹಲಿ, ಜ.೫- ಕೊರೊನಾ ಸೋಂಕಿಗೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಇತರ ದೇಶಗಳಿಗೆ ಪೂರೈಕೆ ಮಾಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ವಿಶ್ವದ ಅನೇಕ ದೇಶಗಳಿಗೆ ಔಷಧಿಯನ್ನು ಭಾರತ ಪೂರೈಕೆ ಮಾಡಿದೆ. ಅದೇ ರೀತಿ ಲಸಿಕೆ ಸಿದ್ಧವಾದ ಬಳಿಕ ಆದ್ಯತೆ ಮೇರೆಗೆ ದೇಶಗಳಿಗೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಹಿನ್ನೆಲೆ ಬಾಂಗ್ಲಾದೇಶ ಭಾರತದಿಂದ ಲಸಿಕೆ ಪಡೆಯಲು ಉತ್ಸುಕವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪುಣೆಯ ಭಾರತೀಯ ಸೆರಂ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲಾ ಅವರು ಕೊರೊನಾ ಸೋಂಕಿಗೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗುವುದು ಎಂದು ನೀಡಿದ ಹೇಳಿಕೆ ನಡುವೆಯೇ ಕೇಂದ್ರ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಆದ್ಯತೆ ಮೇರೆಗೆ ಲಸಿಕೆ ಪೂರೈಕೆ ಮಾಡುವ ಕ್ರಮಕ್ಕೆ ಪ್ರಧಾನಿ ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತದಿಂದ ಕೊರೊನೊ ಸೋಂಕಿಗೆ ಲಸಿಕೆ ಪಡೆಯುವ ಉದ್ದೇಶದಿಂದ ಬಾಂಗ್ಲಾದೇಶದ ಔಷಧ ತಯಾರಿಕಾ ಸಂಸ್ಥೆ, ಭಾರತೀಯ ಸೆರಂ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.
ಭಾರತದಲ್ಲಿ ಉತ್ಪಾದಿಸುವ ಲಸಿಕೆಯನ್ನು ಮೊದಲು ಭಾರತಕ್ಕೆ ಮೀಸಲಿಡಲಾಗುವುದು. ಆ ನಂತರ ಇತರ ದೇಶಗಳಿಗೆ ಪೂರೈಕೆ ಮಾಡುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಆಧಾರ್ ಪೂನಾವಾಲಾ ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೊನ್, ಭಾರತದಿಂದ ಕೊರೊನಾ ವೈರಸ್ ಈಕೆಯನ್ನು ಪಡೆಯುವ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ಅಲ್ಲಿಂದ ಲಸಿಕೆ ಸಿಗಲಿದೆ ಎನ್ನುವ ಆಶಾಭಾವನೆ ಇದೆ ಎಂದು ಹೇಳಿದ್ದಾರೆ.
ಭಾರತದಿಂದ ಲಸಿಕೆ ಪಡೆಯುವ ಸಂಬಂಧ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ನರೇಂದ್ರ ಮೋದಿ ಅವರಿಂದಲೇ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.


ದೇಶದಲ್ಲಿ ಕೊರೊನಾ ಅಬ್ಬರ ಇಳಿಕೆ
ನವದೆಹಲಿ, ಜ. ೫- ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಉಪಟಳ ಕಡಿಮೆಯಾಗುತ್ತಿದೆ. ಕಳೆದ ಒಂದು ವಾರದಿಂದ ಇದೇ ಕಡಿಮೆ ಪರಿಸ್ಥಿತಿ ಮುಂದುವರೆದಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೬ ಸಾವಿರದ ೩೭೫ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೬, ೩೭೫ ಸೋಂಕು ಪ್ರಕರಣಗಳು ದಾಖಲಾಗಿದ್ದು ಇದರೊಂದಿಗೆ ಇಲ್ಲಿಯವರೆಗೆ ದಾಖಲಾಗಿರುವ ಒಟ್ಟು ಸೋಂಕಿತರ ಸಂಖ್ಯೆ ಒಂದು ಕೋಟಿ ೩ ಲಕ್ಷದ ೫೬ ಸಾವಿರದ ೮೪೫ ಕ್ಕೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ೨೦೧ ಸೋಂಕಿತರು ಗುಣಮುಖರಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ದೇಶದಲ್ಲಿ ಮಹಾಮಾರಿ ಸೋಂಕಿ
ನಿಂದ ಮೃತಪಟ್ಟವರ ಸಂಖ್ಯೆ ಒಂದು ಲಕ್ಷದ ೪೯ ಸಾವಿರದ ೮೫೦ ತಲುಪಿದೆ.
ಈ ನಡುವೆ ದೇಶದಲ್ಲಿ ಗುಣಮುಖ ಆಗುತ್ತಿರುವ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದುವರೆಗೂ ೯೯ ಲಕ್ಷದ ೭೫ ಸಾವಿರದ ೯೫೮ ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ. ಒಟ್ಟಾರೆ ಗುಣಮುಖ ಪ್ರಮಾಣ ಶೇಕಡಾ ೯೬. ೩೨ ರಷ್ಟಿದೆ.
ಸೋಂಕಿನಿಂದ ಸಾವನ್ನಪ್ಪುವ ಸಂಖ್ಯೆ ದೇಶದಲ್ಲಿ ದಿನೇದಿನೇ ಕಡಿಮೆಯಾಗುತ್ತಿದೆ. ಸಚಿವಾಲಯದ ಈಗಿನ ಮಾಹಿತಿ ಅನ್ವಯ ದೇಶದಲ್ಲಿ ಈಗ ಸಾವಿನ ಪ್ರಮಾಣ ಶೇಕಡ ೧.೪೫ ಕ್ಕೆ ಇಳಿಮುಖವಾಗಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದು ಈ ವಿಚಾರದಲ್ಲಿ ದಿನೇದಿನೇ ಇಳಿಕೆ ಕಂಡು ಬರುತ್ತಿದೆ. ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ೨ ಲಕ್ಷದ ೩೧ ಸಾವಿರದ ೩೬ ಪ್ರಕರಣಗಳು ಮಾತ್ರವೇ ದಾಖಲಾಗಿವೆ.
ಗಂಭೀರ ಕಾಯಿಲೆಗಳಿಂದ ಪರಿತಪಿಸುತ್ತಿರುವ ಜನರು ಮಾತ್ರವೇ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಇಂಥವರ ಸಂಖ್ಯೆ ಶೇಕಡಾ ೭೦ ಕ್ಕೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಇದುವರೆಗೂ ಮೃತಪಟ್ಟವರ ಸಂಖ್ಯೆ ಸುಮಾರು ಒಂದೂವರೆ ಲಕ್ಷ ಸಮೀಪಿಸುತ್ತಿದ್ದು ಈ ಪೈಕಿ ಮಹಾರಾಷ್ಟ್ರದಲ್ಲಿ ಸುಮಾರು ೫೦ ಸಾವಿರ ಜನರು ಮೃತಪಟ್ಟಿದ್ದಾರೆ.
ನಂತರದ ಸ್ಥಾನದಲ್ಲಿ ಕರ್ನಾಟಕ ಇದು ಈ ರಾಜ್ಯದಲ್ಲಿ ೧೨ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ನಂತರದ ಸ್ಥಾನದಲ್ಲಿ ತಮಿಳುನಾಡು ದೆಹಲಿ ಪಶ್ಚಿಮ ಬಂಗಾಳ ಉತ್ತರ ಪ್ರದೇಶ ಆಂಧ್ರಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಸೇರಿವೆ ಎಂದು ಸಚಿವಾಲಯ ಅಂಕಿ-ಅಂಶಗಳ ಸಮೇತ ತಿಳಿಸಿದೆ.