ಮುಂದಿನ ವರ್ಷ ಮಾನವ ಸಹಿತ ಬಾಹ್ಯಾಕಾಶ ಪ್ರವಾಸ

ನವದೆಹಲಿ, ಜು.೨೨- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಪ್ರವಾಸ ಯೋಜನೆಯೂ ಮುಂದಿನ ವರ್ಷದಲ್ಲಿ ಅನುಷ್ಠಾನಕ್ಕೆ ಬರಲಿದೆ.
ಬಾಹ್ಯಾಕಾಶ ಇಲಾಖೆಯ ಸಚಿವ ಡಾ.ಜಿತೇಂದ್ರ ಸಿಂಗ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಭೂಮಿಯ ಗುರುತ್ವಾಕರ್ಷಣೆ ಬಹಳ ಕಡಿಮೆಯಿರುವ ಅಥವಾ ಇಲ್ಲದೇ ಇರುವ ಅಂತರಿಕ್ಷ ವ್ಯಾಪ್ತಿಗೆ ಜನರನ್ನು ಪ್ರವಾಸಕ್ಕೆ ಕಳಿಸಲು ಇಸ್ರೋ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ, ಇಸ್ರೋ ಜಗತ್ತಿನ ೬೧ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷದ ಕೊನೆಯ ಭಾಗದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಭಾರತೀಯ ವಾಯುಪಡೆಯ ನಾಲ್ವರು ಯೋಧರು ತಯಾರಿ ನಡೆಸಿದ್ದಾರೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ದೇಶೀಯವಾಗಿ ನೌಕೆಯನ್ನು ಸಿದ್ಧಪಡಿಸಿದೆ. ಈ ನೌಕೆಯಲ್ಲಿ ಗಗನಯಾತ್ರಿಗಳಾಗಿ ಬಾಹ್ಯಾಕಾಶಕ್ಕೆ ತೆರಳುವ ಯೋಧರು, ಕೆಲವು ಕಾಲ ಅಲ್ಲಿ ಪರ್ಯಟನೆ ಮಾಡಿ ಆನಂತರ ಭೂಮಿಗೆ ಹಿಂದಿರುಗುವ ಯೋಜನೆ ಇದಾಗಿದೆ ಎಂದು ಅವರು ವಿವರಿಸಿದರು.
ಇನ್ನೂ ೨೦೨೩ರ ಆರಂಭಿಕ ತಿಂಗಳುಗಳಲ್ಲಿ ಇಸ್ರೋ ಚಂದ್ರಯಾನ-೩ ಅನ್ನು ಕೈಗೊಳ್ಳಲಿದೆ. ಇದಾದ ನಂತರ ಆದಿತ್ಯ ಎಲ್-೧ ಉಗ್ರಹವನ್ನು ಉಡಾವಣೆ ಮಾಡಲಾಗುವುದು. ಈ ಉಪಗ್ರಹ ಸೂರ್ಯನ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಉಪಯೋಗಕರವಾಗಲಿದೆ. ಹಾಗೆಯೇ ೨೦೨೩ರ ವರ್ಷಾಂತ್ಯದೊಳಗೆ ಗಗನಯಾನದ ಅಬಾರ್ಟ್ ಪ್ರದರ್ಶನ ಪರೀಕ್ಷೆಯನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.