ಮುಂದಿನ ವರ್ಷ ಕಲಬುರಗಿಯಲ್ಲಿ ರಾಜ್ಯಮಟ್ಟದ `ಗಡಿನಾಡ ಕನ್ನಡ ಉತ್ಸವ’

ಕಲಬುರಗಿ,ಮೇ.14: ಕನ್ನಡ ನಾಡು-ನುಡಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜೊತೆಗೂಡಿ ಮುಂದಿನ ವರ್ಷ ಕಲಬುರಗಿಯಲ್ಲಿ ರಾಜ್ಯಮಟ್ಟದ ಗಡಿನಾಡ ಕನ್ನಡ ಉತ್ಸವ' ನಡೆಸಲಾಗುವುದು ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಘೋಷಣೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಕಲಬುರಗಿಯಲ್ಲಿ ಉತ್ಸವ ನಡೆಸಬೇಕೆಂಬ ಕೊಟ್ಟ ಮನವಿ ಪತ್ರವನ್ನು ಸ್ವೀಕರಿಸಿ ಶುಕ್ರವಾರ ಕಾರವಾರದಲ್ಲಿ ನಡೆದಗಡಿನಾಡ ಕನ್ನಡ ಉತ್ಸವ’ದಲ್ಲಿ ಈ ವಿಷಯ ಘೋಷಣೆ ಮಾಡಿ ಮಾತನಾಡಿದ ಅವರು, ಕನ್ನಡ ಭಾಷೆ ಸಂಪನ್ನ, ಸಮೃದ್ಧ ಶ್ರೀಮಂತ ಭಾಷೆ. ಇದರ ಉಳಿವು ಹಾಗೂ ಜಾಗೃತಿಗಾಗಿ ಇಂಥ ಉತ್ಸವಗಳು ಬಹಳ ಅತ್ಯವಶ್ಯಕವಾಗಿವೆ. ಹಾಗಾಗಿ, ಕನ್ನಡ ಸಾರಸ್ವತ ಲೋಕಕ್ಕೆ ಮೊಟ್ಟ ಮೊದಲ ಗ್ರಂಥ ಕೊಟ್ಟ ಕವಿರಾಜ ಮಾರ್ಗದ ನೆಲವಾದ ಕಲಬುರಗಿಯಲ್ಲಿ ಈ ಉತ್ಸವ ನಡೆಸುವ ಮೂಲಕ ಮತ್ತಷ್ಟು ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸರ್ವ ಭಾಷೆಗಳ ಸಂಕಲಿತ ಭೂಪ್ರದೇಶ ಎನಿಸಿದ ನಮ್ಮ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿಯಲ್ಲಿ `ಗಡಿನಾಡ ಕನ್ನಡ ಉತ್ಸವ’ದ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಕನ್ನಡದ ವಾತಾವರಣ ಇನ್ನಷ್ಟು ವಿಸ್ತಾರಗೊಳಿಸಬೇಕಾಗಿದೆ. ಪ್ರಯುಕ್ತ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರ ಸಹಕಾರದೊಂದಿಗೆ ಈ ಉತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಪರಿಷತ್ತಿನ ಪದಾಧಿಕಾರಿಗಳು ಉತ್ಸುಕರಾಗಿದ್ದೇವೆ ಎಂದ ಅವರು, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಸರಕಾರಿ ನೌಕರರ ಹಿತಾಸಕ್ತಿಯೊಂದಿಗೆ ನಾಡು ನುಡಿ ವಿಚಾರವಾಗಿಯೂ ಕೂಡ ತುಂಬಾ ಮುತುರ್ವಜಿ ವಹಿಸುತ್ತಿರುವುದು ಅವರಲ್ಲಿನ ಮಾತೃಭಾಷಾಭಿಮಾನ ಎತ್ತಿ ತೋರಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.