ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಜಿಲ್ಲೆ ನೀರಾವರಿಃ ಮಾಜಿ ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಜ.2-ನೀರಾವರಿ ಜೊತೆಗೆ ವಿದ್ಯುತ್ ಕ್ಷೇತ್ರಕ್ಕೂ ಹೆಚ್ಚು ಒತ್ತು ಕೊಟ್ಟಿದ್ದರಿಂದ ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಜಿಲ್ಲೆ ನೀರಾವರಿ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಬೇಡಿಕೆ ಮತ್ತು ಪೂರೈಕೆಗೆ ಹೊಂದಾಣಿಕೆ ಆಗಲಿದೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬಬಲೇಶ್ವರ ಸಮೀಪದಲ್ಲಿ ಪ್ರಗತಿಪರ ರೈತ ಧರ್ಮರಾಜ ಬಿಳೂರು ಅವರ ದ್ರಾಕ್ಷಿ ತೋಟದಲ್ಲಿ ಕೃಷಿ ಹೊಂಡ ಉದ್ಘಾಟಿಸಿ, ನಡೆದ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಆರಂಭಿಸಿದಾಗ, ಇದರಲ್ಲಿ ನೀರು ಬರುವುದು ಎಂದೋ? ಏನೋ? ಎಂದು ನಗೆಯಾಡಿದ್ದರು. ಕಾಮಗಾರಿಗಳು ಮುಂದೆವರೆದಾಗ ಇವರು ಕಮಿಷನ್ ಆಸೆಗಾಗಿ ಕಾಲುವೆ ಅಗೆಯುತ್ತಿದ್ದಾರೆ ಎಂದು ಕೊಂಕು ನುಡಿದರು. ಅದೇ ಕಾಲುವೆಗಳ ಮೂಲಕ ಜಿಲ್ಲೆಯಾಧ್ಯಂತ ಇಂದು ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳಿಗೆ ನೀರು ಹರಿಸಲಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದರು.
ಮುಖ್ಯ ಕಾಲುವೆಯಿಂದ ಶಾಖಾ ಕಾಲುವೆ ಮಾತ್ರ ಸಾಕು. ಹೋಲಗಾಲುವೆ ಬೇಡ ಎಂದು ರೈತರೆ ಹೇಳುತ್ತಿದ್ದು, ಅಷ್ಟರ ಮಟ್ಟಿಗೆ ನೀರು ನಮ್ಮ ರೈತರಿಗೆ ಲಭ್ಯವಾಗಿದೆ. 50ಸಾವಿರದಿಂದ 2ಲಕ್ಷ ರೂ. ಬೆಲೆಯುಳ್ಳ ಭೂಮಿಯ ಬೆಲೆ ಇಂದು 15-20ಲಕ್ಷ ರೂ.ಗೆ ಏರಿದೆ ಇದಕ್ಕೆಲ್ಲ ನೀರಾವರಿ ಹೆಚ್ಚಿದಂತೆಲ್ಲ ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ಅಂದೆ ನಾವು ಮುಂದಾಲೋಚನೆ ಮಾಡಿ, ಜಿಲ್ಲೆಯ ಎಲ್ಲೆಡೆ 110ಕೆವಿ ಸ್ಟೇಷನ್‍ಗಳು, 220ಕೆವಿ ಸ್ಟೇಷನ್‍ಗಳು ಮತ್ತು 440ಕೆ.ವಿ ಸ್ಟೇಷನ್‍ಗಳನ್ನು ಸ್ಥಾಪಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಇದರಿಂದ ರೈತರ ಬೇಡಿಕೆ ತಕ್ಕಂತೆ ವಿದ್ಯುತ್ ಒದಗಿಸಲು ಸಹಾಯಕವಾಗಿದೆ ಎಂದು ಹೇಳಿದರು.
ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ.ಕೆ.ಗೋಟ್ಯಾಳ ಅವರು ಮಾತನಾಡಿ 25ವರ್ಷಗಳ ಹಿಂದೆ ಈ ಭಾಗದಲ್ಲಿ ಕೇವಲ 2ವಿದ್ಯುತ್ ಸ್ಟೇಷನ್‍ಗಳು ಇದ್ದವು. ಒಂದು ಗಲಗಲಿಯಲ್ಲಿ ಇನ್ನೊಂದು ಬಬಲೇಶ್ವರದಲ್ಲಿ ಮಾತ್ರ ಈ ಭಾಗದಲ್ಲಿದ್ದವು. ಆದರೆ ಇಂದು ಮಮದಾಪುರ, ಶಿರಬೂರ, ದೇವರಗೆಣ್ಣೂರ, ಕಂಬಾಗಿ, ಕಾಖಂಡಕಿ, ಅರ್ಜುಣಗಿ, ನಿಡೋಣಿ, ಬೆಳ್ಳುಬ್ಬಿ ಸೇರಿದಂತೆ ಪ್ರತಿ ಗ್ರಾಮಗಳಲ್ಲಿ 110ಕೆ.ವಿ ವಿದ್ಯುತ್ ಸ್ಟೇಷನ್‍ಗಳು ಪ್ರಾರಂಭವಾಗಿದೆ. ಬರುವ ವರ್ಷಗಳಲ್ಲಿ 20ಎಂ.ಎ ಇದ್ದ ವಿದ್ಯುತ್ ಸರಬರಾಜು 250ಎಂ.ಎ ಆಗಲಿದೆ. ನೀರಾವರಿ ಪಂಪ್ ಸೆಟ್ ಅಗತ್ಯವಿರುವ ವಿದ್ಯುತ್‍ನ್ನು 2-3ವರ್ಷಗಳಲ್ಲಿ ಸರಬರಾಜು ಆಗುವದು ಎಂದರು.
ಕೆ.ಎಂ.ಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ್, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್, ಜಿ.ಪಂ ಮಾಜಿ ಅಧ್ಯಕ್ಷರಾದ ಸೋಮನಾಥ ಬಾಗಲಕೋಟ, ವಿ.ಎಸ್.ಪಾಟೀಲ್ ಬಬಲೇಶ್ವರ, ದ್ರಾಕ್ಷಿ ಬೆಳೆಗಾರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ಮುಂಬಾರೆಡ್ಡಿ, ಕೆಬಿಜೆಎನ್‍ಎಲ್ ಅಭಿಯಂತರ ಶಂಕರ ರಾಠೋಡ, ರೈತ ಮುಖಂಡರಾದ ತಮ್ಮಣ್ಣ ಹಂಗರಗಿ, ಆರ್.ಜಿ.ಯರನಾಳ, ರಾಮಣ್ಣ ಶೇಬಾನಿ, ಭಿಮಶಿ ಬಾಗಾದಿ, ಅಪ್ಪುಗೌಡ ಪಾಟೀಲ್ ಶೇಗುಣಶಿ, ಸೋಮನಾಥ ಕಳ್ಳಿಮನಿ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ್ವರ ಬಬಲೇಶ್ವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಸಿದರಾಯ ಆಡಿನ, ಈರಯ್ಯ ಕಟಗೇರಿಮಠ, ಮಲ್ಲು ಕೆಂಪವಾಡ ಮತ್ತಿತರರು ಉಪಸ್ಥಿತರಿದ್ದರು.