ಮುಂದಿನ  ಬಜೆಟ್ ವೇಳೆಗೆ ನವಲಿಯಲ್ಲಿ ಸಮತೋಲಿತ ಆಣೆಕಟ್ಟು ಯೋಜನೆ ಕಾರ್ಯರೂಪಕ್ಕೆ: ಡಿಕೆಶಿ


(ಸಂಜೆವಾಣಿ ವಾರ್ತೆ)
ಸಿಂಧನೂರು, ಡಿ.31:ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದ್ದು, ನವಲಿಯಲ್ಲಿ ಸಮತೋಲಿತ ಆಣೆಕಟ್ಟು ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ.
ಸಿಂಧನೂರಿನ ತಿಮ್ಮಾಪುರ ಏತನೀರಾವರಿ ಯೋಜನೆ ಉದ್ಘಾಟನೆ ಮತ್ತು ಪದವಿ ಕಾಲೇಜು ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣ, ಸುಮಾರು 30 ಟಿಎಂಸಿಗೂ ಹೆಚ್ಚು ನೀರು ರಾಜ್ಯಕ್ಕೆ ನಷ್ಟವಾಗುತ್ತಿದೆ. ಆದ ಕಾರಣ ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣದ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗಿದೆ. ಈ ಯೋಜನೆಯಿಂದ ಈ ಭಾಗದ ರೈತರ ನೀರಿನ ಕೊರತೆ ಬಗೆಹರಿದಂತಾಗುತ್ತದೆ. ಈ ಯೋಜನೆ ಸಂಬಂಧ ತೆಲಂಗಾಣ, ಆಂಧ್ರ ಪ್ರದೇಶದ ಸರ್ಕಾರದ ಜೊತೆಗೆ ಮಾತನಾಡಲಾಗುವುದು. ಮೂರು ರಾಜ್ಯಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡಬೇಕಾಗಿದೆ. ಮುಂದಿನ ಬಜೆಟ್ ವೇಳೆಗೆ ಇದನ್ನು ಕಾರ್ಯರೂಪಕ್ಕೆ ತರಲಾಗುವುದು.
ಸಮತೋಲಿತ ಅಣೆಕಟ್ಟಿನಿಂದ ನಮ್ಮ ರಾಜ್ಯದ  ಒಂದಷ್ಟು ಹಳ್ಳಿಗಳು ಮುಳುಗಡೆಯಾಗುತ್ತವೆ. ಈ ವೇಳೆ ಜನರನ್ನು ಸ್ಥಳಾಂತರ ಮಾಡಬೇಕು, ಅವರಿಗೆ ಪರಿಹಾರ ನೀಡಬೇಕಾಗುತ್ತದೆ. ಸಮುದ್ರಕ್ಕೆ ವ್ಯರ್ಥವಾಗಿ ನೀರು ಹರಿಯುವುದನ್ನು ತಪ್ಪಿಸಲು ಮತ್ತು ರೈತರ ಹಿತದೃಷ್ಟಿಯಿಂದ ಈ ಯೋಜನೆಯ ಅನುಷ್ಟಾನಕ್ಕೆ ಸರ್ಕಾರ ಬದ್ದವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಮಾತು ಕೊಟ್ಟಿತ್ತು. ಅಧಿಕಾರಕ್ಕೆ ಬಂದ ತಕ್ಷಣ ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಯಾವುದೇ ಪಕ್ಷ ನಡೆದುಕೊಳ್ಳುವುದು ಕಷ್ಟದ ಕೆಲಸ. ಆದರೆ ನನ್ನ 40 ವರ್ಷಗಳ ರಾಜಕೀಯ ಜೀವನದ ಅನುಭವದ ಪ್ರಕಾರ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ.
ಈ ಹಿಂದಿನ ಬಿಜೆಪಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಎಲ್ಲರ ಖಾತೆಗೆ 15 ಲಕ್ಷ, 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಈ ದೇಶದ ಜನರಿಗೆ ಮೋಸ ಮಾಡಿತು. ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಮೋಸ ಮಾಡಿತು. ಆದರೆ ನಾವು ಅಕ್ಕಿಯ ಬದಲು ಹಣವನ್ನು ಕೊಟ್ಟಿದ್ದೇವೆ. ಎಲ್ಲರ ಮನೆ ಬೆಳಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಶಯ.
ನಾಲ್ಕು ಗ್ಯಾರಂಟಿಗಳು ಯಶಸ್ವಿಯಾಗಿ ಜನರನ್ನು ತಲುಪಿವೆ. ಐದನೇ ಗ್ಯಾರಂಟಿ ಯೋಜನೆ ಯುವನಿಧಿಯ ಹಣ ಮುಂದಿನ ಜನವರಿ ತಿಂಗಳಿನಲ್ಲಿ ಯುವಕ- ಯುವತಿಯರ ಖಾತೆಗೆ ಜಮೆಯಾಗಲಿದೆ. ಬರಗಾಲದ ಸಮಯದಲ್ಲೂ ಜನರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಗ್ಯಾರಂಟಿ ಯೋಜನೆಗಳಿಗೆ ಸುಮಾರು 60 ಸಾವಿರ ಕೋಟಿಯಷ್ಟು ಹಣ ಖರ್ಚು ಮಾಡಲಾಗಿದೆಂದರು.