ಮುಂದಿನ ಪೀಳಿಗೆ ಹೋರಾಟಗಾರರ ಶ್ರಮ ಅರಿಯಲಿ: ಸಿದ್ರಾಮ ಪಾರಾ

ಬೀದರ್: ದೇಶ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ. ದೇಶಕ್ಕಾಗಿ ಹಲವಾರು ಹೋರಾಟಗಾರರು ಮಡಿದಿದ್ದಾರೆ. 1947ರ ಸಂದರ್ಭದಲ್ಲಿ ಹೋರಾಟ ಮಾಡಿದ ರಾಮರಾವ ಕುಲಕರ್ಣಿ ಮತ್ತು ಪುಂಡಲಿಕರಾವ ಪಾಟೀಲ ಅವರನ್ನು ಇಂದು ಕಣ್ಣಾರೆ ಕಂಡು ಸನ್ಮಾನಿಸಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಕ.ರಾ.ಶಿ. ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ತಿಳಿಸಿದರು.

ಕರ್ನಾಟಕ ಕಾಲೇಜು ಇತಿಹಾಸ ವಿಭಾಗ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮತ್ತು ಸಸಿ ನೆಡುವ ಕಾರ್ಯಕ್ರಮ, ಪೋಸ್ಟರ್ ಪ್ರದರ್ಶನ ಹಾಗೂ ಸ್ವಾತಂತ್ರ್ಯ ಚಳುವಳಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಬೀದರ ಜಿಲ್ಲಾ ಪ್ರಜ್ಞಾ ಪ್ರವಾಹ ಕಾರ್ಯಕಾರಿಣಿ ಸದಸ್ಯರು ಮತ್ತು ಆಯುರ್ವೇದ ವೈದ್ಯರಾದ ಡಾ. ವಿದ್ಯಾಸಾಗರ ಪಂಚಾಳ ಅವರು ಮಾತನಾಡಿ “ಇಂದಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಕುರಿತು ಯುವ ಪೀಳಿಗೆ ತಿಳಿದುಕೊಳ್ಳುವ ಆಸಕ್ತಿ ವಹಿಸುತ್ತಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ತಾನಾಗಿಯೇ ಬಂದಿಲ್ಲ. ಅದೆಷ್ಟೊ ಜೀವಗಳು ಬಲಿದಾನಗೈದು ನಮಗೆ ಸುಖವಾಗಿರಲು ಕಾರಣಿಕರ್ತರಾಗಿದ್ದಾರೆ. ಇಂತಹ ತ್ಯಾಗಿಗಳ ಜೀವನ ಮತ್ತು ಸಾಧನೆ ಕಾಲೇಜಿನ ಯುವ ವಿದ್ಯಾರ್ಥಿಗಳಿಗೆ ತಿಳಿಸಲು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ತನ್ನ ಕುಟುಂಬದ ಜೊತೆಗೆ ದೇಶಕ್ಕಾಗಿ ಒಂದಿಷ್ಟು ಸಮಯ ಪ್ರತಿಯೊಬ್ಬರೂ ನೀಡಿದರೆ ಭಾರತ ಉಜ್ವಲವಾಗಿ ದೈದೀಪ್ಯಮಾನವಾಗಿ ಬೆಳಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರಾದ ಪುಂಡಲಿಕರಾವ ಪಾಟೀಲ ಮತ್ತು ರಾಮರಾವ ಕುಲಕರ್ಣಿ ಅವರನ್ನು ಗೌರವ ಸನ್ಮಾನ ನೆರವೇರಿಸಲಾಯಿತು. ಇದಕ್ಕೂ ಮುಂಚಿತವಾಗಿ ಕಾಲೇಜಿನ ಆವರಣದಲ್ಲಿ ಸಸಿ ನೆಡಲಾಯಿತು.

ಪ್ರಾಸ್ತಾವಿಕವಾಗಿ ಡಾ. ರವಿಚಂದ್ರನ್ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲಕ್ಷ್ಮೀ ಕುಂಬಾರ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಮಾಡಿಕೊಟ್ಟರು. ಕು. ಲೀನಾ ಪ್ರಾರ್ಥಿಸಿದರು. ಸಂಖ್ಯಾಶಾಸ್ತ್ರದ ಉಪನ್ಯಾಸಕ ಬಸವರಾಜ ಕೂಡಂಬುಲ್ ಸ್ವಾಗತಿಸಿದರು. ಅಫ್ರೋಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರಾಶಿ ಸಂಸ್ಥೆಯ ನಿರ್ದೇಶಕ ಸಿದ್ಧರಾಜ ಪಾಟೀಲ, ಪ್ರಾಚಾರ್ಯರಾದ ಡಾ. ಎಂ.ಎಸ್.ಚೆಲ್ವಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಪ್ರೊ. ಶ್ರೀಕಾಂತ ದೊಡ್ಡಮನಿ, ಪ್ರಾಧ್ಯಾಪಕರಾದ ದಿಲಿಪಕುಮಾರ, ಆಶಾ ಮುದ್ದಾ, ಗೀತಾ ರಾಗಾ, ಜ್ಯೋತಿ ಕರ್ಪೂರ, ಗೀತಾ ಪೋಸ್ತೆ, ಡಾ. ಸುನಿತಾ ಕೂಡ್ಲಿಕರ್, ಸಂಗೀತಾ ಮಾನಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.