ಮುಂದಿನ ಪೀಳಿಗೆಗೆ ಸಂಸ್ಕøತಿ ಉಳಿಸುವ ಜವಾಬ್ದಾರಿ ನಮ್ಮದು

ಬ್ಯಾಡಗಿ, ನ 2: ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ರಾಜ್ಯೋತ್ಸವವು ಒಂದು ಸಂಭ್ರಮದ ಹಬ್ಬವಾಗಿದ್ದು, ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರ ಹೆಚ್ಚು ಮಹತ್ವದಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಎಸ್‍ಜೆಜೆಎಂ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಾಡು ಸುಂದರ ನಾಡು, ನಮ್ಮ ಪ್ರಕೃತಿ ಸೌಂದರ್ಯದಿಂದ ತುಂಬಿದೆ. ಕರ್ನಾಟಕ ಒಂದು ಸುಂದರ ಬೀಡಾಗಿದ್ದು, ಕಲೆ, ಸಾಹಿತ್ಯ, ನಾಟಕ, ನೃತ್ಯ ಮುಂತಾದ ಕಲೆಗಳಿಂದ ಶ್ರೀಮಂತವಾಗಿದೆ. ನಮ್ಮ ನಾಡು ನುಡಿ ಮತ್ತು ಕಲೆ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರದಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ ಎಸ್.ಎ.ಪ್ರಸಾದ್ ಮಾತನಾಡಿ, ಕನ್ನಡ ರಾಜ್ಯೋತ್ಸವವು ಕರುನಾಡಿನ ಕನ್ನಡಿಗರ ಹೆಮ್ಮೆಯ ದಿನವಾಗಿದೆ. ಮಹಾಕವಿ ಕುವೆಂಪುರವರು “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂದು ಹೆಮ್ಮೆಯ ನುಡಿಯನ್ನು ಸಾರುವ ಮೂಲಕ ಕನ್ನಡತನದ ಸಾರ್ವಭೌಮತ್ವವನ್ನು ಕಂಗೊಳಿಸಿದ್ದಾರೆ. 1956 ರ ನವೆಂಬರ್ 1ರಂದು ದಕ್ಷಿಣ ಭಾರತದ ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಕರ್ನಾಟಕ ಎಂಬ ಒಂದು ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. ಅಂದಿನಿಂದ ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಹಬ್ಬದ ಸಂಭ್ರಮದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ನೃತ್ಯಗಳು ನೋಡುಗರ ಮನರಂಜಿಸಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ಫಕ್ಕೀರಮ್ಮ ಚಲುವಾದಿ.ಉಪಾಧ್ಯಕ್ಷೆ ಗೀತಾ ರಾಯ್ಕರ್. ಟಿಇಓ ಕೆ.ಎಂ.ಮಲ್ಲಿಕಾರ್ಜುನ. ಮುಖ್ಯಾಧಿಕಾರಿ ಏಸು ಬೆಂಗಳೂರು ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.