ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.30: ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಶ್ರಮಿಸುತ್ತಿದೆ. ಸುಸ್ಥಿರ ಅಂತರ್ಜಲ ಅಭಿವೃದ್ಧಿಯ ಗುರಿಯೊಂದಿಗೆ ಪ್ರಸಕ್ತ ವರ್ಷ ‘ವಿಶ್ವ ಜಲದಿನ’ವನ್ನು ಆಚರಿಸಲಾಗುತ್ತಿದೆಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ನಡೆದ ತಾಲ್ಲೂಕು ಪಂಚಾಯತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದೊಂದಿಗೆ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಲಕ್ಷಾಮ ಈ ಜಗತ್ತಿನ ಮುಂದೆ ಇರುವ ಬಿಕ್ಕಟ್ಟುಗಳಲ್ಲಿ ಅತ್ಯಂತ ಗಭೀರವಾದುದು, ನಮ್ಮ ದೇಶದಲ್ಲಿ ಕೂಡ ಈ ಸಮಸ್ಯೆ ತೀವ್ರವಾಗಿದೆ, ಒಟ್ಟು ಜನಸಂಖ್ಯೆಯ ಶೇ.50ರಷ್ಟು ಜನರಿಗೆ ಶುದ್ದ ಕುಡಿಯುವ ನೀರು ದೊರೆಕುತ್ತಿಲ್ಲ, ಜನರು ನೀರನ್ನು ಮಿತವಾಗಿ ಬಳಕೆ ಮಾಡಿ, ಮುಂದಿನ ಪೀಳಿಗೆಗೆ ನೀರು ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ,
ಕೇಂದ್ರ ಸರ್ಕಾರದ ಜಲಜೀವನ ಮಿಷನ ಯೋಜನೆಡಿಯಲ್ಲಿ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರಿನ ಸಂಪರ್ಕವನ್ನು ಎಲ್ಲ ಗ್ರಾಮಸ್ಥರು ಪಡೆದುಕೊಂಡು ನೀರನ್ನು ಉಳಿಸಿ ಎಂದು ತಿಳಿಸಿದರು.
ಹಿರಿಯ ವಕೀಲ ಅಬ್ದುಲ್ ಸಾಬ್ ಅವರು ಜಲ ನಿರ್ವಾಹಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ರವೀಂದ್ರ ನಾಯಕ, ತಾ.ಪಂ.ಇ.ಒ ಮಡಗಿನಬಸಪ್ಪ, ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿ ಕಾಂತರಾಜ, ವಕೀಲರ ಸಂಘದ ತಾ.ಅಧ್ಯಕ್ಷ ಎಸ್.ಮಂಜುನಾಥಗೌಡ, ಕಾರ್ಯದರ್ಶಿ ಪ್ಯಾಟೇಗೌಡ, ಮಲ್ಲಿಗೌಡ, ವೆಂಕಟೇಶ ನಾಯ್ಕ, ತಾ.ಪಂ.ಸಹಾಯಕ ಅಧಿಕಾರಿ ಬಸವರಾಜ ಇದ್ದರು.