
ಕೋಲಾರ, ಮಾ,೨೨- ಪ್ರತಿಯೊಬ್ಬರು ತಮ್ಮ ಹಕ್ಕುಗಳು, ಕರ್ತವ್ಯದ ಬಗ್ಗೆ ತಿಳಿದುಕೊಳ್ಳಬೇಕು. ಮತ್ತು ನೀರು, ಅರಣ್ಯ ಸಂರಕ್ಷಣೆ ಮಾನವನ ಅದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ನೀರು, ಮಣ್ಣು ಮತ್ತು ಪರಿಸರ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕೆಲಸ ಹೆಚ್ಚಿಗೆ ನಡೆಯಬೇಕು. ಇದಕ್ಕಾಗಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಲಾರ ಹೊರವಲಯದ ಭಟ್ರಹಳ್ಳಿ ಜ್ಯೋತಿ ಐಟಿಐ ಕಾಲೇಜಿನಲ್ಲಿ ನೆಹರು ಯುವಕೇಂದ್ರ, ಕೋಲಾರ, ರಾಷ್ಟ್ರೀಯ ಜಲ ಮೀಷನ್, ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಕಲಾ ತಂಡ, ಗಮನ ಮಹಿಳಾ ಸಮೂಹ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನವು ಪ್ರಜೆಗಳಿಗೆ ಸರಿಸಮಾನವಾಗಿ ಹಕ್ಕುಗಳನ್ನು ಕೊಟ್ಟು ಹಾಗೆಯೇ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ತಿಳಿಸಿದೆ. ಇದನ್ನು ಚಾಚೂ ತಪ್ಪದೇ ಪಾಲಿಸಿದಾಗ ಪರಿಸರ, ನೀರು, ಮಣ್ಣು ಸಂರಕ್ಷಣೆಯಾಗುತ್ತದೆ ಎಂದರು.
ಅಂಬೇಡ್ಕರ್ ಆಶಯದಂತೆ ಕಾನೂನು ಸುವ್ಯವಸ್ಥೆಯ ಕುರಿತು ಮನುಕುಲದ ಉಳಿವಿಗಾಗಿ ವಿಶ್ವಸಂಸ್ಥೆಯು ವಿಶ್ವ ಜಲ ದಿನದ ಘೋಷಣೆ ಮಾಡಿದ್ದು ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಒಪ್ಪಿಸಿಕೊಂಡಿವೆ ಎಂದರು. ನೀರಿಲ್ಲದ ಬದುಕು ಊಹೆಗೂ ನಿಲುಕದ್ದು, ಹುಟ್ಟಿನಿಂದ ಸಾಯುವವರೆಗೂ ಪ್ರತೀ ಜೀವಿಗೆ ನೀರು ಅತ್ಯಗತ್ಯ. ಸಾಯುವ ಮೊದಲೂ ಕೂಡ ಒಂದು ಹನಿ ನೀರು ಬಾಯಿಗೆ ಬೇಕು ಎನ್ನುವ ಪದ್ಧತಿ ಇದೆ. ಹೀಗಾಗಿ ನೀರನ್ನು ಜೀವಜಲ ಎಂದೇ ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದ ಸರಿಯಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗುತ್ತಿದೆ. ಬಯಲು ಸೀಮೆಯಂತಹ ಪ್ರದೇಶಗಳಲ್ಲಿ ಬೇಸಿಗೆ ಬಂತೆಂದರೆ ಸಾಕು ಎಲ್ಲಡೆ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುವುದು ದುರಂತಹ. ಇಂತಹ ಸಮಸ್ಯೆಗಳಿಗೊಂದು ಪರಿಹಾರ ನೀಡಬೇಕು. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸಬೇಕು. ಸಂವಿಧಾನದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದಮ್ಮೆಗೆ ಅವಕಾಶ ಕಲ್ಪಿಸಿ ನಾಗರೀಕ ಹಕ್ಕುಗಳ ಸಂರಕ್ಷಣೆಗೆ ಮುಂದಾಗುವ ಮೂಲಕ ಶ್ರಮಿಸಲಾಗುತ್ತಿದೆ ಎಂದರು.
ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷರಾದ ನಾಗರಾಜ್ ಮಾತಾನಾಡಿ ೧೯೯೩ರ ಬ್ರೆಜಿಲ್ ನರಿಯೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಹಾಗೂ ಅಭಿವೃದ್ದಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನ ಕೈಗೊಂಡು ಪ್ರತಿ ವರ್ಷ ಮಾರ್ಚ್ ೨೨ ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿತು. ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಶ್ರಮಿಸುತ್ತಿದೆ. ಸುಸ್ಥಿರ ಅಂತರ್ಜಲ ಅಭಿವೃದ್ಧಿಯ ಗುರಿಯೊಂದಿಗೆ ಪ್ರಸಕ್ತ ವರ್ಷ ’ವಿಶ್ವ ಜಲದಿನ’ವನ್ನು ಆಚರಿಸಲಾಗುತ್ತಿದೆಂದು ತಿಳಿಸಿದರು.
ಕಲಾತಂಡದಿಂದ ವೆಂಕಟಚಲಪತಿ ನೀರು ಜಾಗೃತಿ ಹಾಡುಗಳನ್ನು ಹಾಡಿ ಜಾಗೃತಿ ಮೂಡಿಸಿದರು. ಈ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥಗೌಡ, ಗಮನ ಮಹಿಳ ಸಮೂಹದ ಸಂಧ್ಯಾ, ಸುನೀತ, ಕಾಲೇಜು ಸಿಬಂದ್ದಿ, ವಿದ್ಯಾರ್ಥಿಗಳು ಭಾಗವಹಿಸಿದರು.